ಅಗರಬತ್ತಿ ಉದ್ಯಮಕ್ಕೆ ಅಗತ್ಯ ನೆರವು- ಸಿಎಂ

ಬೆಂಗಳೂರು,ನ.೨೪- ಅಗರಬತ್ತಿ ಉದ್ಯಮದ ಸಬಲೀಕರಣಕ್ಕೆ ರಾಜ್ಯಸರ್ಕಾರ ಎಲ್ಲ ನೆರವು ನೀಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ ಆಯೋಜಿಸಿದ್ದ ಎಕ್ಪೋ ಉದ್ಘಾಟಿಸಿ ಮಾತನಾಡಿದ ಅಗರಬತ್ತಿ ಉದ್ಯೋಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಉದ್ಯೋಗ ಲಭ್ಯವಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಉದ್ಯಮ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ ಎಂದರು.
ಉತ್ತರ ಕರ್ನಾಟಕದಲ್ಲಿ ಕೂಲಿಕಾರರ ವೆಚ್ಚ ಕಡಿಮೆ ಇದೆ, ಹಾಗಾಗಿ ಅಗರಬತ್ತಿ ಉದ್ಯಮದವರು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಉದ್ಯಮ ಸ್ಥಾಪಿಸಬೇಕು ಎಂದು ಹೇಳಿದ ಮುಖ್ಯಮಂತ್ರಿಗಳು ಅಗರಬತ್ತಿ ಉದ್ಯಮದ ಬೆಳವಣಿಗೆಗೆ ಅಗತ್ಯವಾದ ನೆರವು ಸಹಕಾರ ನೀಡುವುದಾಗಿ ಅವರು ಹೇಳಿದರು.
ರಾಜ್ಯಸರ್ಕಾರ ಸಣ್ಣಪುಟ್ಟ ಸಮುದಾಯಗಳಾದ ಕುಂಬಾರ, ಬಡಿಗಾರ, ಚಮ್ಮಾರ, ಕಮ್ಮಾರ ಸೇರಿದಂತೆ ಹಲವು ಸಮುದಾಯಗಳಿಗೆ ಸಾಲ ನೀಡುವ ಯೋಜನೆಯನ್ನು ಜಾರಿ ಮಾಡುತ್ತಿದೆ. ಇದರಿಂದ ಈ ವರ್ಗದ ಸಬಲೀಕರಣದ ಜತೆಗೆ ಸರ್ಕಾರದ ಆರ್ಥಿಕತೆ ಕೆಳಸ್ತರದಿಂದ ಬಲಗೊಳ್ಳುತ್ತದೆ ಎಂದರು.
ಅಗರಬತ್ತಿ ಉದ್ಯಮ ಪರಿಮಳದ ಜತೆಗೆ ಸಂತೋಷ ಹರಡುವ ಕೆಲಸ ಮಾಡುತ್ತಿದೆ. ೨೫೦ ವರ್ಷದಿಂದ ಕೆಲಸ ಮಾಡುತ್ತಿದ್ದೇವೆ. ಸುಗಂಧವು ಮನುಷ್ಯ ಎಂತಹ ಪರಿಸ್ಥಿತಿಯಲ್ಲಿದ್ದರೂ ಅವನ ಮನಸ್ಸಿನ ಚಿಂತನೆಯನ್ನು ಬದಲಾಯಿಸುತ್ತದೆ ಎಂದರು.
ಅಗರಬತ್ತಿ ಉದ್ಯಮದಲ್ಲಿ ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳಬಹುದು, ಮಹಿಳೆಯರನ್ನು ಬೃಹತ್ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಉದ್ದಿಮೆಗಳ ಅಗತ್ಯವಿದೆ ಎಂದು ಅವರು ಹೇಳಿzರು.
ಈ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಮುರುಗೇಶ್‌ನಿರಾಣಿ, ಶಾಸಕ ರಾಜುಗೌಡ, ಅಗರಬತ್ತಿ ಉತ್ಪಾದಕರ ಸಂಘದ ಅಧ್ಯಕ್ಷ ಅರ್ಜುನ್‌ರಂಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.