ಅಗತ್ಯ ಸೇವೆ ಹೊರತು ಪಡಿಸಿ ಎಲ್ಲವೂ ಬಂದ್

ದಾವಣಗೆರೆ,ಏ.22: ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸಲಿಕ್ಕಾಗಿ ಜಿಲ್ಲಾಡಳಿತ ಇಂದಿನಿಂದ ಅಗತ್ಯ ಸೇವೆ ಹೊರತು ಪಡಿಸಿ, ಇತರೆ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದು, ಇದರ ಮುನಸೂಚನೆ ಇಲ್ಲದೆ ಮಾರುಕಟ್ಟೆಗೆ ಬಂದ ಗ್ರಾಹಕರು ಪರದಾಡಿದರು.ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ ಘೋಷಿಸಿದೆ. ಇದರ ಬೆನ್ನಲ್ಲೆ ಇಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ನೇತೃತ್ವದ ತಂಡ ನಗರದಲ್ಲಿರುವ ಬಟ್ಟೆ, ಚಿನ್ನಾಭರಣ, ಪಾತ್ರೆ ಸೇರಿದಂತೆ ಇತರೆ ಅಂಗಡಿಗಳನ್ನು ಬಂದ್ ಮಾಡಿಸಿದರು.ಆದರೆ, ಮಾಹಿತಿಯ ಕೊರತೆಯಿಂದ ಬಟ್ಟೆ, ಚಿನ್ನಾಭರಣ ಸೇರಿದಂತೆ ಇತರೆ ಸಾಮಗ್ರಿಗಳ ಖರೀದಿಗಾಗಿ ಪರಸ್ಥಳದಿಂದ ಬಂದಿದ್ದ ಗ್ರಾಹಕರು ಪರದಾಡಿದರು.
ಮೊದಲೇ, ಮಾಹಿತಿ ನೀಡದೆ ಅಂಗಡಿಗಳನ್ನು ಬಂದ್ ಮಾಡಿಸಿದ್ದರಿಂದ ಗೊಂದಲಕ್ಕೆ ಒಳಗಾಗಿರುವ ವರ್ತಕತರು, ಇದ್ದಕ್ಕಿದ್ದಂತೆ ವ್ಯಾಪಾರ-ವಹಿವಾಟು ಬಂದ್ ಮಾಡಿಸುತ್ತಿರುವ ಜಿಲ್ಲಾಡಳಿತದ ಕ್ರಮ ಸರಿಯಲ್ಲ. ಇದರಿಂದ ಗ್ರಾಹಕರಿಗೂ ಅನ್ಯಾಯವಾಗಲಿದೆ. ನಾವು, ಸರ್ಕಾರದ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.

ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಎಲ್ಲಾ ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಮಾಡಿಸಿದ್ದೇವೆ. ಮೇ 4ರ ವರೆಗೆ ಬಂದ್ ಇರುತ್ತದೆ. ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಅದನ್ನು ನಿಯಂತ್ರಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ವಾರಾಂತ್ಯದ ಕರ್ಫ್ಯೂನಲ್ಲಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಎಂದಿನಂತೆ ಸಂಚಾರ ಇರಲಿದೆ ಎಂದು ಹೇಳಿದರು.