ಅಗತ್ಯ ಸೇವೆಯಲ್ಲಿರುವರಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನಕ್ಕೆ ಅವಕಾಶ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೧೮;  85 ವರ್ಷ ಮೇಲ್ಪಟ್ಟವರು, ವಿಕಲಚೇತನರು ಹಾಗೂ ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾದವರಿಗೆ ಮತದಾನದಿಂದ ವಂಚಿತರಾಗದಂತೆ ಚುನಾವಣಾ ಆಯೋಗ ಇವರಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ಅರ್ಹರೆಲ್ಲರಿಗೂ ಶೇ.100ರಷ್ಟು 12 ಡಿ ಫಾರಂ ವಿತರಣೆ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಲೋಕಸಭಾ ಚುನಾವಣೆ-2024ರ ಸಂಬಂಧ ವಿಧಾನಸಭಾ ಕ್ಷೇತ್ರವಾರು ಪೋಸ್ಟಲ್ ಬ್ಯಾಲೆಟ್ ಹಾಗೂ ಎವಿಇಎಸ್‍ಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.12-ಡಿ ಫಾರಂ ವಿತರಣೆ ಮಾಡಿದ ನಂತರ ಅವರು ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಲೇಬೇಕು ಎಂಬುವುದು ಕಡ್ಡಾಯವಲ್ಲ. ಇದು ಅವರಿಗೆ ನೀಡುವ ಒಂದು ಸೌಲಭ್ಯವಾಗಿದೆ. 12 ಡಿ ಫಾರಂಗೆ ಒಪ್ಪಿಗೆ ನೀಡಿ,  ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡುತ್ತೇನೆ. ಪೋಸ್ಟಲ್ ಬ್ಯಾಲೆಟ್ ನೀಡಿ ಎಂದು ವಾಪಾಸ್ಸು ಕೊಟ್ಟಾಗ ಮಾತ್ರ ಅದು ಪೋಸ್ಟಲ್ ಬ್ಯಾಲೆಟ್ ಮತದಾನಕ್ಕೆ ಒಪ್ಪಿಗೆ ಸೂಚಿಸಿದಂತಾಗುತ್ತದೆ ಎಂದು ಹೇಳಿದರು.12 ಡಿ ವಿತರಣೆ ಹಾಗೂ  ಸಂಗ್ರಹಕ್ಕೆ ಸಂಬಂಧಪಟ್ಟ ತಂಡದವರು 85 ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರ ಮನೆಗೆಳಿಗೆ ಖುದ್ದಾಗಿ ನೀಡಬೇಕು. ಇದಕ್ಕೆ ಸಂಬಂಧಪಟ್ಟಂತೆ ಸ್ವೀಕೃತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಾಕೀತು ಮಾಡಿದರು.