ಅಗತ್ಯ ಸೇವೆಗಳ 99 ಮತದಾರರಿಂದ ಮತ ಚಲಾವಣೆ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಏ.೨೦; ಲೋಕಸಭಾ ಸಾರ್ವತ್ರಿಕ ಚುನಾವಣೆ ಕರ್ತವ್ಯ ನಿಮಿತ್ಯ ಮತದಾನ ದಿನದಂದು ಗೈರು ಹಾಜರಿ ಹಾಗೂ ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಪೋಸ್ಟಲ್ ವೋಟಿಂಗ್ ಸೆಂಟರ್‍ನಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸಿದ್ದು, ಮೊದಲ ದಿನವಾದ ಶುಕ್ರವಾರ ಜಿಲ್ಲೆಯ 99 ಅಗತ್ಯ ಸೇವಾ ಮತದಾರರು ಮತ ಚಲಾಯಿಸಿದ್ದಾರೆ.ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾಗಿರುವ ವಿವಿಧ ಕ್ಷೇತ್ರಗಳ ಸಿಬ್ಬಂದಿಗಳು ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗವು ಮತದಾನ ಮಾಡಲು ವಿಶೇಷ ಕಲ್ಪಿಸಿದ್ದು, ಮೊದಲ ದಿನ ಶುಕ್ರವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆಎಸ್‍ಆರ್‍ಟಿಸಿ, ಪೊಲೀಸ್ ಇಲಾಖೆ, ಆಕಾಶವಾಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪತ್ರಕರ್ತರು ಸೇರಿದಂತೆ ಅಗತ್ಯ ಸೇವೆಗಳ ಕ್ಷೇತ್ರದ 99 ಮತದಾರರು ಮತ ಚಲಾಯಿಸಿದರು.ಚಿತ್ರದುರ್ಗ ನಗರದ ತಹಶೀಲ್ದಾರ್ ಕಚೇರಿಯಲ್ಲಿರುವ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಅಂಚೆ ಮತದಾನ ಕೇಂದ್ರಕ್ಕೆ (ಪೋಸ್ಟಲ್ ವೋಟಿಂಗ್ ಸೆಂಟರ್) ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಸಂಬಂಧ ಕರ್ತವ್ಯ ನಿರತ ಗೈರು ಹಾಜರಿ ಮತದಾರರು ಆಗಮಿಸಿ ತಮ್ಮ ಮತ ಚಲಾಯಿಸಬಹುದು. ಅಗತ್ಯ ಸೇವೆಗಳ ನೌಕರರು ಮತ ಚಲಾಯಿಸಲು ಏಪ್ರಿಲ್ 21 ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ