ಅಗತ್ಯ ವಸ್ತು ಖರೀದಿ: ಮಾರುಕಟ್ಟೆಯಲ್ಲಿ ಕ್ಷೀಣಿಸಿದ ಜನಸಂದಣಿ

ದಾವಣಗೆರೆ,ಜೂ.9: ಕೊರೊನಾ ನಿಯಂತ್ರಣ ಕ್ರಮವಾಗಿ ಜಿಲ್ಲಾಡಳಿತ ಜೂನ್ 14ರ ವರೆಗೆ ಲಾಕ್‌ಡೌನ್ ವಿಧಿಸಿದ್ದು, ಇಂದು ಬೆಳಿಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿತ್ತು. ಎರಡು ದಿನಗಳಿಗೊಮ್ಮೆ ಅಗತ್ಯ ವಸ್ತುಗಳ ಖರೀದಿಗೆ ಅನುಮತಿ ನೀಡಿರುವುದರಿಂದ ಮಾರುಕಟ್ಟೆಯಲ್ಲಿ ಈ ಹಿಂದೆ ಸೇರುತ್ತಿದ್ದ ಜನಸ್ತೋಮ ಇಂದು ಕಂಡು ಬರಲಿಲ್ಲ.ಈ ಹಿಂದೆ ವಾರದಲ್ಲಿ ಎರಡು ದಿನ ಮಾತ್ರ (ಸೋಮವಾರ ಮತ್ತು ಗುರುವಾರ) ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದ್ದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ ದಿನಸಿ, ತರಕಾರಿ ಸೇರಿದಂತೆ ಇತರೆ ದಿನ ಬಳಕೆ ವಸ್ತುಗಳನ್ನು ಖರೀದಿಸುತ್ತಿದ್ದರು. ಆದರೆ, ಈಗ ಎರಡು ದಿನಗಳಿಗೊಮ್ಮೆ ಖರೀದಿಗೆ ಅವಕಾಶ ಕಲ್ಪಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿಲ್ಲ.ನಗರದ ಕೆ.ಆರ್. ಮಾರುಕಟ್ಟೆ, ಗಡಿಯಾರ ಕಂಬ, ವಿನೋಬ ನಗರ, ನಿಟ್ಟುವಳ್ಳಿ, ಕೆಟಿಜೆ ನಗರ, ಎಪಿಎಂಸಿ ಯಾರ್ಡ್ನ ತರಕಾರಿ ಮಾರುಕಟ್ಟೆ ಸೇರಿದಂತೆ ಇತರೆಡೆಗಳಲ್ಲಿ ಈ ಹಿಂದೆ ಸೇರುತ್ತಿದ್ದ ಜನಸಂದಣಿ ಕಂಡು ಬರಲಿಲ್ಲ.ಮಾರುಕಟ್ಟೆಯ ಕೆಲ ದಿನಸಿ, ತರಕಾರಿ ಅಂಗಡಿಗಳ ಮುಂದೆ ಜನರಿರಲಿಲ್ಲ. ಇನ್ನೂ ಕೆಲ ಅಂಗಡಿಗಳ ಮುಂದೆ ಕೆಲವೇ ಜನರಿದ್ದ ಕಾರಣ ಈ ಹಿಂದೆ ಸಂಭವಿಸುತ್ತಿದ್ದಂತೆ ನೂಕು ನುಗ್ಗಲು ಏರ್ಪಟ್ಟಿರಲಿಲ್ಲ. ಇನ್ನೂ ತರಕಾರಿ, ಹಣ್ಣಿನ ಅಂಗಡಿಗಳ ಮುಂದೆಯು ಹೇಳಿಕೊಳ್ಳುವ ಸಂಖ್ಯೆಯಲ್ಲಿ ಗ್ರಾಹಕರು ಇರಲಿಲ್ಲ. ಆದರೆ, ಮದ್ಯದಂಗಡಿಗಳ ಮುಂದೆ ಮದ್ಯಪ್ರಿಯೆ ಸಂಖ್ಯೆ ಹೆಚ್ಚಾಗಿ ಕಂಡುಬಂತು.ದಿನಸಿ ಅಂಗಡಿಗಳಿಗೆ ಲಾಕ್‌ಡೌನ್ ಪರಿಣಾಮ ಅಗತ್ಯವಾಗಿ ಬೇಕಿದ್ದ ಸಾಮಗ್ರಿ ಈ ಹಿಂದೆ ಪೂರೈಕೆಯಾಗಿರಲಿಲ್ಲ. ಆದರೆ, ಈ ವಾರದಿಂದ ಅಗತ್ಯ ಪ್ರಮಾಣದಲ್ಲಿ ದಿನ ಬಳಕೆ ವಸ್ತುಗಳು ಬರುತ್ತಿದ್ದರೂ ಅವುಗಳನ್ನು ಖರೀದಿಸಲು ಜನರು ಬರುತ್ತಿಲ್ಲ. ಹೀಗಾಗಿ ಈ ಹಿಂದಿನAತೆ ವ್ಯಾಪಾರ ಸಹ ಆಗುತ್ತಿಲ್ಲ ಎಂದು ದಿನಸಿ ಅಂಗಡಿ ಮಾಲೀಕರೊಬ್ಬರು ಅಳಲು ತೋಡಿಕೊಂಡರು.ನಗರದಲ್ಲಿ ಮಧ್ಯಾಹ್ನ 12 ಗಂಟೆಯ ವರೆಗೆ ದಿನಸಿ, ತರಕಾರಿ ಅಂಗಡಿ ತೆರೆದಿದ್ದವು. ಆದರೆ, ಬಟ್ಟೆ, ಪಾತ್ರೆ, ಚಿನ್ನಾಭರಣದ ಅಂಗಡಿಗಳು ತೆರೆದಿರಲಿಲ್ಲ. ಹೀಗಾಗಿ ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಬಟ್ಟೆ ಸಿಗಬಹುದೆಂದು ಜಿಲ್ಲಾ ಕೇಂದ್ರಕ್ಕೆ ಬಂದವರು ತೊಂದರೆ ಅನುಭವಿಸಿ, ಬಟ್ಟೆ ಸಿಗದೆ ಬಂದ ದಾರಿಗೆ ಸುಂಕ ಇಲ್ಲವೆಂದು ತಮ್ಮ ಊರುಗಳಿಗೆ ವಾಪಾಸ್ಸಾದರು.