ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನ

ಮೈಸೂರು, ಮೇ.28: ಕೊರೊನಾ ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ (ಮೇ 29) ಜೂನ್ 7 ರವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೆ ಬರಲಿದೆ. ಹೀಗಾಗಿ ಇಂದು ಬೆಳಿಗ್ಗೆಯಿಂದಲೇ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ.
ಕೊರೊನಾ ಭೀತಿಯನ್ನು ಮರೆತು ಸಾರ್ವಜನಿಕರು ಅಗತ್ಯ ವಸ್ತು ಖರೀದಿಗೆ ಮುಂದಾಗಿದ್ದಾರೆ. ಇದರಿಂದ ನಗರದಲ್ಲಿ ಜನದಟ್ಟಣೆ, ವಾಹನ ಸಂಚಾರ ಹೆಚ್ಚಾಗಿದೆ. ನಗರದ ದೇವರಾಜ ಮಾರುಕಟ್ಟೆ, ಶಿವರಾಮ್ ಪೇಟೆ, ಸಂತೇಪೇಟೆ, ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಖರೀದಿಗಾಗಿ ಸಾರ್ವಜನಿಕರು ಮುಗಿಬಿದ್ದಿದ್ದಾರೆ. ಕೆಲವರು ತಂತಮ್ಮ ಬಡಾವಣೆಗಳಲ್ಲಿರುವ ಅಂಗಡಿಗಳಲ್ಲೇ ಸರತಿ ಸಾಲಿನಲ್ಲಿ ನಿಂತು ಅಗತ್ಯ ವಸ್ತುಗಳನ್ನು ಖರೀದಿಸಿದರು. ಇದರಿಂದ ಅಂಗಡಿಯವರಿಗೆ ವ್ಯಾಪಾರ ಜೋರಾಗಿದೆ.
ಜಿಲ್ಲಾದ್ಯಂತ 10 ದಿನಗಳು ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದರೂ ವಾರದಲ್ಲಿ ಎರಡು ದಿನ ಅಂದರೆ ಸೋಮವಾರ, ಗುರುವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯವಸ್ತು ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೂ ಸಾರ್ವಜನಿಕರು ಇಂದು ಅಗತ್ಯ ವಸ್ತು ಖರೀದಿಗೆ ಅಂಗಡಿಗೆ ಲಗ್ಗೆಯಿಟ್ಟಿದ್ದಾರೆ.
ಲಾಕ್ ಡೌನ್ ವೇಳೆ ಹಾಲಿನ ಬೂತ್, ವೈದ್ಯಕೀಯ ಸೇವೆ, ಹಾಪ್ ಕಾಮ್ಸ್ ಗೆ ಒಳಪಡುವ ಹಣ್ಣು-ತರಕಾರಿ ಅಂಗಡಿಗಳು, ನ್ಯಾಯಬೆಲೆ ಅಂಗಡಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.