ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ಹೇರಿಕೆ ಖಂಡಿಸಿ ಪ್ರತಿಭಟನೆ


(ಸಂಜೆವಾಣಿ ಪ್ರತಿನಿಧಿಯಿಂದ)      
ಬಳ್ಳಾರಿ, ಜು.20: ಎಸ್.ಯು.ಸಿ.ಐ (ಸಿ) ಬಳ್ಳಾರಿ ಜಿಲ್ಲಾ ಸಮಿತಿಯಿಂದ ಕೇಂದ್ರ ಸರ್ಕಾರ ಅಕ್ಕಿ, ಗೋಧಿ, ರಾಗಿ, ಹಾಲು, ಮೊಸರು ಮುಂತಾದ ಜೀವನಾವಶ್ಯಕ ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ವಿಧಿಸಿರುವ ಕ್ರಮವನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹಳೆಯ ಬಸ್ ನಿಲ್ದಾಣದ ಬಳಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಪಾಲ್ಗೊಂಡು ಕೇಂದ್ರ ಸರ್ಕಾರದ ಅಮಾನವೀಯ ನಿರ್ಧಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಜನರ ಜೇಬು ಲೂಟಿ ಮಾಡುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ!, ತಿನ್ನುವ ಅನ್ನಕ್ಕೂ ಕನ್ನ ಹಾಕುವ ಸರ್ಕಾರವನ್ನು ಖಂಡಿಸಿ! ಜನರನ್ನು ಬೀದಿಗೆ ತಳ್ಳಿ ಕಾರ್ಪೋರೇಟ್ ಮಾಲೀಕರಿಗೆ ತೆರಿಗೆ ವಿನಾಯಿತಿ ನೀಡುವುದನ್ನು ಒಪ್ಪೊದಿಲ್ಲ! ಮುಂತಾದ ಘೋಷಣೆಗಳನ್ನು ಕಾರ್ಯಕರ್ತರು ಕೂಗಿದರು.
ಎಸ್.ಯು.ಸಿ.ಐ(ಸಿ) ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎ.ದೇವದಾಸ್ ಮಾತನಾಡುತ್ತಾ “ ಈಗಾಗಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರ ಅನ್ನಕ್ಕೂ ಕನ್ನ ಹಾಕುತ್ತಿರುವ ಕೇಂದ್ರ ಸರ್ಕಾರದ ನಡೆ ಅತ್ಯಂತ ಖಂಡನೀಯ. ಇದು ಅತ್ಯಂತ ಜನವಿರೋಧಿ ಸರ್ಕಾರ. ಇನ್ನೊಂದೆಡೆ ಕಾರ್ಪೋರೇಟ್ ಮಾಲೀಕರಿಗೆ ಸಾಕಷ್ಟು ತೆರಿಗೆ ವಿನಾಯಿತಿ ನೀಡುತ್ತಿದೆ. ಶೇ 33ರಷ್ಟಿದ್ದ ಕಾರ್ಪೋರೇಟ್ ತೆರಿಗೆಯನ್ನು ಶೇ.22 ಕ್ಕೆ ಇಳಿಸಿದೆ. ¯ಕ್ಷಾಂತರ ಕೋಟಿ ಕಾರ್ಪೋರೇಟ್ ಸಾಲಗಳನ್ನ ಮನ್ನಾ ಮಾಡಿದೆ. ಇದು ಯಾರ ಪರವಾದ ಸರ್ಕಾರ? ಮಾಲೀಕರಿಂದ-ಮಾಲೀಕರಿಗಾಗಿ-ಮಾಲೀಕರಿಗೋಸ್ಕರ ಇರುವ ಸರ್ಕಾರವೇ ಇದು? ಎಂದು ಪ್ರಶ್ನಿಸಿದರು. ಆದ್ದರಿಂದ ಇಂತಹ ಸರ್ಕಾರಗಳಿಂದ ಜನರಿಗೆ ಅವರ ಹಕ್ಕುಗಳು ಸಿಗುವುದು ಕನಸಿನ ಮಾತು. ಬಲವಾದ ಹೋರಾಟಗಳಿಂದ ಮಾತ್ರ ಬದಲಾವಣೆ ಸಾಧ್ಯ. ದೆಹಲಿಯಲ್ಲಿ ರೈತರು ನಡೆಸಿದ ಸುಧೀರ್ಘ ಹೋರಾಟಗಳಂತೆ ನಾವೆಲ್ಲರೂ ಹೋರಾಟಗಳನ್ನು ಬೆಳಸಬೇಕಾಗಿದೆ. ಬಂಡವಾಳಶಾಹಿ ವ್ಯವಸ್ಥೆಯನ್ನೇ ಬದಲು ಮಾಡುವ ಕ್ರಾಂತಿಕಾರಿ ಚಳುವಳಿಗೆ ಸಜ್ಜಾಗಬೇಕಿದೆ” ಎಂದರು.
ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಮುಂಖಂಡರಾದ ಡಾ.ಪ್ರಮೋದ್ ವಹಿಸಿದ್ದರು. ಜಿಲ್ಲಾ ನಾಯಕರಾದ ಸೋಮಶೇಖರ ಗೌಡ, ಶಾಂತಾ, ಗೋವಿಂದ್, ಸದಸ್ಯರಾದ ಸುರೇಶ್, ಜಗದೀಶ್, ಈಶ್ವರಿ, ರಾಜಾ, ರವಿಕಿರಣ್, ಪಕ್ಷದ ಬೆಂಬಲಿಗರು ಪಾಲ್ಗೊಂಡಿದ್ದರು.