ಅಗತ್ಯ ವಸ್ತುಗಳ ಖರೀದಿಗೆ ೬-೧೦ ಗಂಟೆವರೆಗೆ ಮಾತ್ರ ಅವಕಾಶ – ನಂತರ ಜಿಲ್ಲೆಗೆ ಬೀಗ

ವೀಕೆಂಡ್ ಲಾಕ್ ಡೌನ್ : ರಾತ್ರಿ ೯ ರಿಂದ ಸೋಮವಾರ ಬೆಳಿಗ್ಗೆ ೬ ಗಂಟೆವರೆಗೆ ಸಂಪೂರ್ಣ ಬಂದ್

 • ರಾಯಚೂರು.ಏ.೨೩- ಕೊರೊನಾ ಹಿನ್ನೆಲೆಯಲ್ಲಿ ಮೊದಲ ವೀಕೆಂಡ್ ಲಾಕ್ ಡೌನ್ ಇಂದು ರಾತ್ರಿ ೯ ರಿಂದ ಸೋಮವಾರ ಬೆಳಗಿನ ಜಾವ ೬ ಗಂಟೆಯವರೆಗೆ ನಡೆಯಲಿದ್ದು, ಅಗತ್ಯ ವಸ್ತುಗಳ ಖರೀದಿಗೆ ಮುಂಜಾನೆ ೬ ಗಂಟೆಯಿಂದ ೧೦ ಗಂಟೆವರೆಗೆ ಮಾತ್ರ ರಿಯಾಯಿತಿ ನೀಡಲಾಗಿದೆ.
  ಮೇ.೪ ರವರೆಗೆ ನೈಟ್ ಕರ್ಫ್ಯೂ ಮತ್ತು ಮಧ್ಯಾಹ್ನ ೨ ಗಂಟೆವರೆಗೆ ವ್ಯಾಪಾರ ವಹಿವಾಟು ನಡೆಸುವ ಮಾರ್ಗಸೂಚಿ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಭಾರೀ ವ್ಯವಸ್ಥೆ ಮಾಡಲಾಗಿತ್ತು. ವೀಕೆಂಡ್ ಸಂಪೂರ್ಣ ಬಂದ್ ಆದೇಶದ ಹಿನ್ನೆಲೆಯಲ್ಲಿ ಇಂದು ಸಂಜೆ ೯ ಗಂಟೆಯಿಂದ ಸೋಮವಾರ ಬೆಳಗಿನ ಜಾವ ೬ ಗಂಟೆಯವರೆಗೂ ನಗರಕ್ಕೆ ಲಾಕ್ ಬೀಳಲಿದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿ ಹೊರತು ಪಡಿಸಿದರೇ, ಬೇರೆ ಯಾವುದೇ ವ್ಯಾಪಾರ ವಹಿವಾಟು ನಡೆಸುವಂತಿಲ್ಲ. ಇದಕ್ಕಾಗಿ ಜಿಲ್ಲಾಡಳಿತ ಭಾರೀ ಸಿದ್ಧತೆ ಮಾಡಿಕೊಂಡಿದೆ.
  ನಿನ್ನೆಯಿಂದ ವ್ಯಾಪಾರ ವಹಿವಾಟುಗಳ ಮೇಲೆ ನಿರ್ಬಂಧವೇರಲಾಗಿದೆ. ತರಕಾರಿ, ಕಿರಾಣಿ ಮತ್ತು ಅಗತ್ಯ ವಸ್ತುಗಳು ಹೊರತು ಪಡಿಸಿದರೇ, ಯಾವುದೇ ವಹಿವಾಟು ನಡೆಸದಂತೆ ಸೂಚಿಸಲಾಗಿತ್ತು. ಇಂದು ಸಹ ೫೨೨ ಕೊರೊನಾ ಪ್ರಕರಣಗಳ ಪತ್ತೆ ತಳಮಳಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಹೆಚ್ಚುತ್ತಿರುವ ಪ್ರಕರಣದಿಂದ ಕಳವಳಗೊಂಡಿದೆ. ಜನರಲ್ಲಿ ಮಾಸ್ಕ್ ಧರಿಸುವ ಜಾಗೃತಿ ತೀವ್ರಗೊಂಡಿದೆ. ಇಂದು ನಗರದಲ್ಲಿ ಸಂಚರಿಸುವ ಬಹುತೇಕರು ಮಾಸ್ಕ್ ಧರಿಸಿರುವುದು ವಿಶೇಷವಾಗಿತ್ತು.
  ಆದರೆ, ಸಾಮಾಜಿಕ ಅಂತರದ ಕೊರತೆ ಅನೇಕ ಕಡೆ ಕಂದು ಬಂದಿತು. ಕಿರಾಣಿ ಶಾಪ್ ಮತ್ತಿತರ ಕಡೆಯಲ್ಲಿ ಜನರು ವೀಕೆಂಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಅತ್ಯಧಿಕ ಸಾಮಾಗ್ರಿಗಳ ಖರೀದಿ ನಡೆಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರದ ಉಲ್ಲಂಘನೆ ಕಾಣಬಹುದಾಗಿತ್ತು. ಮೊದಲನೇ ಅಲೆಯಲ್ಲಿ ದೇಶಾದ್ಯಂತ ಕೊರೊನಾ ಪ್ರಕರಣ ಗಂಭೀರ ಸ್ವರೂಪದಲ್ಲಿದ್ದರೂ, ಜಿಲ್ಲೆಯಲ್ಲಿ ಮಾತ್ರ ಮೇ.೧೬ ರವರೆಗೂ ಶೂನ್ಯ ಪ್ರಕರಣಗಳಿದ್ದವು. ಆದರೆ, ಮಹಾರಾಷ್ಟ್ರದ ವಲಸಿಗರ ಆಗಮನದಿಂದ ಪ್ರಕರಣ ಸಂಖ್ಯೆ ತೀವ್ರಗೊಂಡವು.
  ಅದೇ ರೀತಿಯ ಜಾಗೃತಿಯನ್ನು ಈಗ ಅನುಸರಿಸಿದರೇ, ಮತ್ತೇ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಸಾಧ್ಯ. ಈ ಹಿನ್ನೆಲೆಯಲ್ಲಿ ವೀಕೆಂಡ್ ಎರಡು ದಿನಗಳ ಲಾಕ್ ಡೌನ್ ಕಟ್ಟುನಿಟ್ಟಾಗಿ ನಿರ್ವಹಿಸಲು ಜಿಲ್ಲಾಡಳಿತ ಮುಂದಾಗಿದೆ. ಪೊಲೀಸರು ಈಗಾಗಲೇ ಎಲ್ಲಾ ಸಿದ್ಧತೆ ಕೈಗೊಂಡಿದ್ದಾರೆ. ರಾತ್ರಿ ೯ ಗಂಟೆಯಿಂದ ಯಾರು ಹೊರಗೆ ಬಾರದಂತೆ ತಡೆಯಲಾಗುತ್ತದೆ. ಎರಡು ದಿನಗಳ ಲಾಕ್ ಡೌನ್ ಯಶಸ್ವಿ ಮೂಲಕ ಕೊರೊನಾ ಹರಡುವಿಕೆಯ ಚೈನ್ ಕಡಿತಗೊಳಿಸಲು ಜಿಲ್ಲಾಡಳಿತ ಸನ್ನದ್ಧಾಗಿದೆ.
  ಈಗಾಗಲೇ ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಜನರಲ್ಲೂ ತೀವ್ರ ಆತಂಕ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಜನರ ಓಡಾಟವೂ ಕಡಿಮೆಯಾಗಿದೆ. ಇಂದು ಮಧ್ಯಾಹ್ನ ೨ ಗಂಟೆಯಿಂದ ರಸ್ತೆಗಳಲ್ಲಿ ಜನ ಓಡಾಟ ಅಲ್ಪಪ್ರಮಾಣದಲ್ಲಿದ್ದರೇ, ಇನ್ನೂ ಕೆಲ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಒಟ್ಟಾರೆಯಾಗಿ ನಾಳೆಯಿಂದ ಎರಡು ದಿನಗಳ ಕಾಲ ನಡೆಯುವ ವೀಕೆಂಡ್ ಕರ್ಫ್ಯೂಗೆ ಜನರು ಸಿದ್ಧರಾಗಬೇಕಾಗಿದೆ.
  ಕೊರೊನಾ ತೀವ್ರವಾಗಿರುವುದರಿಂದ ಪ್ರತಿಯೊಬ್ಬರು ಮನೆಗಳಲಿದ್ದು, ಜಿಲ್ಲಾಡಳಿತಕ್ಕೆ ಸಹಕರಿಸುವ ಮೂಲಕ ಈ ಕೊರೊನಾ ಆರ್ಭಟವನ್ನು ತಡೆಯಲು ಮುಂದಾಗಬೇಕಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿದಾಗ ಇಂದು ರಾತ್ರಿ ೯ ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ಮುಂಜಾನೆ ೬ ಗಂಟೆಯಿಂದ ೧೦ ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿ ಹೊರತು ಪಡಿಸಿದರೇ, ಮತ್ತೇ ಯಾವುದೇ ವ್ಯಾಪಾರ ವಹಿವಾಟು ನಡೆಯುವುದಿಲ್ಲ. ೧೦ ಗಂಟೆಯಿಂದ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲಾಗುತ್ತದೆಂದು ಹೇಳಿದರು.