ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದ ಜನತೆ

ನವಲಗುಂದ ಏ 28: ಕೊರೊನಾ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 15 ದಿನಗಳವರೆಗೆ ಲಾಕ್‍ಡೌನ್ ಘೋಷಣೆ ಮಾಡಿದ್ದು, ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯವಸ್ತುಗಳ ಖರೀದಿಗೆ ಅವಕಾಶ ಮಾಡಿ ಕೊಟ್ಟರೂ ಕೂಡಾ ಮಾರುಕಟ್ಟೆಯಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಮುಗಿಬಿದ್ದು ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿರುವ ದೃಶ್ಯ ಮಂಗಳವಾರ ಕಂಡು ಬಂದಿತು.
ಒಂದೆಡೆ ತರಕಾರಿ, ಹಣ್ಣು, ಹೂವು, ದಿನಸಿ ವಸ್ತುಗಳ ಖರೀದಿಗೆ ಮಹಿಳೆಯರು ಪುರುಷರು ಮುಂದಾದರೇ ಮದ್ಯಪ್ರೀಯರು ಸಾಲುಗಟ್ಟಿ ಮದ್ಯ ಖರೀದಿಸುತ್ತಿರುವುದು ದೊಡ್ಡ ಸಂಖ್ಯೆಯಲ್ಲಿ ಕಂಡುಬಂತು.
ಪುರಸಭೆಯವರು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳುವಂತೆ ಎಚ್ಚರಿಕೆ ಮೇಲೆ ಎಚ್ಚರಿಕೆ ಕೊಟ್ಟರು ಕ್ಯಾರೆ ಎನ್ನದ ಜನರು ತಮ್ಮ ತಮ್ಮ ವ್ಯವಹಾರದಲ್ಲಿ ಮಗ್ನರಾಗಿದ್ದನ್ನು ಕಂಡು ಪುರಸಭೆಯವರು ಅನಿವಾರ್ಯವಾಗಿ ದಂಡ ವಿಧಿಸಿದರು. ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ವ್ಯಾಪಾರ ಮಾಡುತ್ತಿದ್ದ ಕೆಲವು ಅಂಗಡಿಗಳನ್ನು ಬಂದ್ ಮಾಡಿಸಿದರು.
ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆ ಇದ್ದರೆ ಜನದಟ್ಟೆಣೆಯಾಗುತ್ತದೆ ಎಂದು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರ ಮಾಡಿದರೂ ಸಂತೆ ದಿನವಾಗಿದ್ದ ಮಂಗಳವಾರ ಅಲ್ಲಿಯೂ ಹಳ್ಳಿಗಳಿಂದ ಆಗಮಿಸಿದ್ದ ಜನರ ಜನದಟ್ಟಣೆಯಿಂದಾಗಿ ಜಾತ್ರೆಯಂತೆ ಕಂಡುಬಂತು. ಇದರಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿ ಕೆಲಹೊತ್ತು ಟ್ರಾಫಿಕ್ ಜಾಮ್ ಕೂಡಾ ಆಗಿತ್ತು. ಮಾಸ್ಕ್ ಹಾಕದೇ ಅನಗತ್ಯವಾಗಿ ತಿರುಗಾಡುತ್ತಿದ್ದ ದ್ವಿಚಕ್ರವಾಹನ ಸವಾರರಿಗೆ ಪೆÇಲೀಸರು ಲಾಠಿ ತೋರಿಸಿ ಎಚ್ಚರಿಕೆ ನೀಡಿ ಕಳುಹಿಸುತ್ತಿರುವುದು ಸಾಮಾನ್ಯವಾಗಿತ್ತು.
ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ನಮ್ಮ ಜನಕ್ಕೆ ಬುದ್ದಿ ಬರೋದು ಯಾವಾಗ ಎಂಬುದು ಎಲ್ಲರಲ್ಲಿಯೂ ಕಾಡುತ್ತಿರುವ ಪ್ರಶ್ನೆಯಾಗಿದ್ದು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಸಂತೆಗೆ ಬಂದಿದ್ದ ಬಸವರಾಜ ಕೆರಿಮಠ ಅಭಿಪ್ರಾಯ ವ್ಯಕ್ತಪಡಿಸಿದರು.