ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಧ್ಯಾಹ್ನದವರಿಗೆ ವ್ಯಾಪಾರ ಮಾಡಿದ ಜನರು

ದೇವದುರ್ಗ.ಜೂ.೦೮-ವ್ಯಾಪಕವಾಗಿ ಹರಡುತ್ತಿರುವ ಕರೊನಾ ಎರಡನೇ ಅಲೆ ತಡೆಯಲು ಜಿಲ್ಲಾಧಿಕಾರಿ ಮೂರನೇ ಸುತ್ತಿನ ಕಠಿಣ ಲಾಕ್‌ಡೌನ್ ಜಾರಿಗೊಳಿಸಿದ್ದರು. ಈ ಹಿನ್ನೆಲೆ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಮಂಗಳವಾರ ಅವಕಾಶ ನೀಡಲಾಯಿತು.
ಬೆಳಗ್ಗೆಯಿಂದಲೇ ಪಟ್ಟಣ ಸೇರಿ ಗ್ರಾಮೀಣ ಭಾಗದ ಜನರು ಪಟ್ಟಣಕ್ಕೆ ಆಗಮಿಸಿ ತರಕಾರಿ, ಕಿರಾಣಿ ಸಾಮಗ್ರಿ ಸೇರಿ ವಿವಿಧ ವಸ್ತುಗಳನ್ನು ಖರೀದಿಸಿದರು. ವಾಹನಗಳ ಓಡಾಟಕ್ಕೆ ಮಧ್ಯಾಹ್ನ ೨ಗಂಟೆ ವರೆಗೆ ಅವಕಾಶ ನೀಡಲಾಗಿತ್ತು. ಮಧ್ಯಾಹ್ನ ಪುರಸಭೆ ಸಿಬ್ಬಂದಿ ಕಸ ವಿಲೇವಾರಿ ವಾಹನದಲ್ಲಿ ಸೈರನ್ ಹಾಕಿ, ವ್ಯಾಪಾರಿ ಮಳಿಗೆಗಳನ್ನು ಬಂದ್ ಮಾಡಿಸಿದರು.
ಇದಕ್ಕು ಮೊದಲು ಪಟ್ಟಣದ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ, ಜೆಪಿ ಸರ್ಕಲ್, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಗಾಂಧಿ ವೃತ್ತ ಸೇರಿ ವಿವಿಧೆಡೆ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು. ಗ್ರಾಮೀಣ ಭಾಗದಿಂದ ಬರುವ ವಾಹನಗಳಿಗೆ ಮಧ್ಯಾಹ್ನದವರೆಗೆ ಅವಕಾಶ ಕಲ್ಪಿಸಲಾಗಿತ್ತು. ಹೋಟೆಲ್, ಖಾನಾವಳಿಗೆ ಪಾರ್ಸಲ್‌ಗೆ ಅವಕಾಶ ನೀಡಲಾಗಿತ್ತು.
ಇದರಿಂದ ನಾಲ್ಕೈದು ದಿನಗಳ ನಂತರ ಪಟ್ಟಣದಲ್ಲಿ ಜನರ ಓಡಾಟ ಹಾಗೂ ವಾಹನಗಳ ಸಂಚಾರ ಕಂಡುಬಂದಿತು. ೨ಗಂಟೆ ನಂತರ ಬಹುತೇಕ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.