ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು- ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ

ದಾವಣಗೆರೆ ಏ. 28 :ಕೋವಿಡ್ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮೇ. 27 ರವರೆಗೆ ಕಠಿಣ ನಿರ್ಬಂಧಗಳನ್ನು ಹೇರಿದ್ದು, ಪರಿಸ್ಥಿತಿಯ ದುರ್ಬಳಕೆಗೆ ಜನರಿಗೆ ಅಗತ್ಯವಿರುವ ದಿನಬಳಕೆ ವಸ್ತುಗಳು, ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಹಾಗೂ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರನ್ನು ಪತ್ತೆಹಚ್ಚಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು. ಕೋವಿಡ್ ಸಂಬಂಧಿಸಿದಂತೆ ಸರ್ಕಾರದ ನೂತನ ಮಾರ್ಗಸೂಚಿ ಹಾಗೂ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೋವಿಡ್‌ನ 2ನೇ ಅಲೆ ನಿಯಂತ್ರಿಸಿ, ಸೋಂಕು ವ್ಯಾಪಕವಾಗಿ ಹರಡುವ ಚೈನ್‌ಲಿಂಕ್ ಮುರಿಯಲು, ಸರ್ಕಾರ ಮೇ. 12 ರವರೆಗೆ ಕಠಿಣ ನಿರ್ಬಂಧ ವಿಧಿಸಿದೆ, ಅಲ್ಲದೆ ಜಿಲ್ಲೆಯಾದ್ಯಂತ ಕಲಂ 144 ರನ್ವಯ ನಿಷೇಧಾಜ್ಞೆ, ನಿತ್ಯ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 06 ರವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಸಾರ್ವಜನಿಕರು ದಿನಬಳಕೆಯ ಅಗತ್ಯ ವಸ್ತು, ಆಹಾರ ಸಾಮಗ್ರಿ, ತರಕಾರಿ ಹೂವು ಹಣ್ಣು ಇತ್ಯಾದಿಗಳನ್ನು ಖರೀದಿಸಲು ಬೆಳಿಗ್ಗೆ 06 ರಿಂದ 10 ರವರೆಗೆ ಅವಕಾಶ ಕಲ್ಪಿಸಿದೆ. ಆದರೆ ಪರಿಸ್ಥಿತಿಯ ದುರ್ಬಳಕೆ ಮಾಡಿಕೊಳ್ಳಲು ದಿನಬಳಕೆ ವಸ್ತುಗಳು, ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಹಾಗೂ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರನ್ನು ಪತ್ತೆಹಚ್ಚುವ ಸಲುವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತç ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ಈಗಾಗಲೆ ರಚಿಸಲಾಗಿದ್ದು, ಕಾಳದಂಧೆಕೋರರನ್ನು ಪತ್ತೆಹಚ್ಚಿ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದರು.
ಕೋವಿಡ್ ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜು : ಜಿಲ್ಲೆಯಲ್ಲಿ ಕೋವಿಡ್ ಗೆ ಸಂಬಂಧಿಸಿದಂತೆ ಸದ್ಯ ಜನರು ಭಯ ಬೀಳುವ ಪರಿಸ್ಥಿತಿ ಇಲ್ಲ. ಕೋವಿಡ್ ನಿರ್ವಹಣೆಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸಜ್ಜಾಗಿವೆ. ಕೋವಿಡ್ ಕೇರ್ ಸೆಂಟರ್ ಕೂಡ ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿ 1766 ಸಕ್ರಿಯ ಪ್ರಕರಣಗಳಿದ್ದು, ಬೆಡ್ ವ್ಯವಸ್ಥೆ, ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಯಾವುದೇ ಸಮಸ್ಯೆ ಇಲ್ಲ. ಹೆಚ್ಚಿನ ಪ್ರಮಾಣದಲ್ಲಿ ಕೇಸ್ ಬಂದರೂ, ನಿರ್ವಹಣಿಸುವ ರೀತಿಯಲ್ಲಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕರು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಚಾಚುತಪ್ಪದೆ ಪಾಲಿಸುವ ಮೂಲಕ ಕೋವಿಡ್ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಸಹಕರಿಸಬೇಕು ಎಂದರು.

ಕೃಷಿ ಚಟುವಟಿಕೆಗೆ ಗ್ರೀನ್ ಪಾಸ್ : ಮೇ. 14 ರವರೆಗೆ ಕಠಿಣ ನಿರ್ಬಂಧ ಜಾರಿಯಾಗಿರುವುದರಿಂದ ರೈತರಿಗೆ ಕೃಷಿ ಚಟುವಟಿಕೆ, ಕೃಷಿ ಪರಿಕರಗಳ ಲಭ್ಯತೆ ವಿಷಯದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ವಸ್ತುಗಳ ಸೇವೆಯಡಿ ಕೃಷಿ ಪರಿಕರಗಳಾದ ಬಿತ್ತನೆಬೀಜ, ಗೊಬ್ಬರ, ಪೀಡೆನಾಶಕ, ಕೃಷಿ ಯಂತ್ರೋಪಕರಣಗಳು ಸೇರಿರುವುದರಿಂದ, ರೈತ ಸಂಪರ್ಕ ಕೇಂದ್ರಗಳು, ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಸುರಕ್ಷಿತಾ ಕ್ರಮಗಳನ್ನು ಪಾಲಿಸಿ, ಅಗತ್ಯ ಪರಿಕರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕೃಷಿ ಪರಿಕರ ವಿತರಣೆಗಾಗಿ ಗ್ರೀನ್ ಪಾಸ್ (ಅನುಮತಿ ಪತ್ರ ) ಗಳನ್ನು ಅಗತ್ಯವಿದ್ದಲ್ಲಿ ಅಧಿಕೃತ ಮಾರಾಟಗಾರರು, ವಿತರಕರಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ನೀಡಿರುವ ಸೂಚನೆಗಳು ಹಾಗೂ ಸುರಕ್ಷಿತಾ ಕ್ರಮಗಳನ್ನು ಉಲ್ಲಂಘಿಸುವ ಮಾರಾಟಗಾರರು, ವಿತರಕರ ಪರವಾನಗಿ ಅಮಾನತುಗೊಳಿಸುವುದು ಅಥವಾ ರದ್ದುಗೊಳಿಸಲು ಕ್ರಮ ವಹಿಸಲಾಗುವುದು ಎಂದು ಜಂಟಿಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಆರ್‌ಟಿಒ ಶ್ರೀಧರ್, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ದೂಡಾ ಆಯುಕ್ತ ಕುಮಾರಾಸ್ವಾಮಿ, ಆಹಾರ ಇಲಾಖೆ ಜಂಟಿನಿರ್ದೇಶಕ ಮಂಟೆಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.