ಅಗತ್ಯ ವಸ್ತುಗಳಿಗೆ ಮಧ್ಯಾಹ್ನದವರೆಗೆ ವಿನಾಯಿತಿ

?????????????????????????????????????????????????????????????????????????????????????????????????????????????????????????????????????????????????????????????????????????????????????????

ದೇವದುರ್ಗ.ಏ.೨೪-ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ ೪ರವರೆಗೆ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ತಾಲೂಕಿನಲ್ಲೂ ಕಟ್ಟುನಿಟ್ಟಿನ ಲಾಕ್‌ಡೌನ್ ಮಾಡಲು ತಾಲೂಕು ಆಡಳಿತ ಮುಂದಾಗಿದೆ.
ಪಟ್ಟಣದಲ್ಲಿ ಕೆಲ ದಿನಗಳಿಂದ ಅರ್ಧ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಬೆಳಗ್ಗೆ ೬ರಿಂದ ಮಧ್ಯಾಹ್ನ ೨ರವರೆಗೆ ಎಲ್ಲ ವ್ಯಾಪಾರ, ವ್ಯವಹಾರಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಸೋಂಕು ಹೆಚ್ಚಾದ ಕಾರಣ ಸಂಪೂರ್ಣ ಲಾಕ್‌ಡೌನ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಬಸ್ ಸಂಚಾರ, ಜನರ ಓಡಾಟ ಬಿಟ್ಟು, ಬಹುತೇಕ ವ್ಯಾಪಾರ ವಹಿವಾಟು ಬಂದ್ ಮಾಡಲಾಗುತ್ತಿದೆ.
ಅಗತ್ಯ ಸೇವೆಗಳಾದ ಕಿರಾಣಿ ಅಂಗಡಿ, ತರಕಾರಿ, ಹಾಲು, ಮಾಂಸ ಮಾರಾಟ, ಪೆಟ್ರೋಲ್ ಬಂಕ್‌ಗಳಿಗೆ ಬೆಳಗ್ಗೆ ೬ರಿಂದ ಮಧ್ಯಾಹ್ನ ೨ಗಂಟೆವರೆಗೆ ಅವಕಾಶ ನೀಡಲಾಗಿದೆ. ಹೋಟೆಲ್, ಖಾನಾವಳಿಗೆ ಮಧ್ಯಾಹ್ನ ೨ರವರೆಗೆ ಮಾತ್ರ ಪಾರ್ಸಲ್‌ಗೆ ಅವಕಾಶ ನೀಡಲಾಗಿದೆ. ಮೆಡಿಕಲ್ ಶಾಪ್, ಆಸ್ಪತ್ರೆಗಳಿಗೆ ನಿರ್ಬಂಧವಿಲ್ಲ. ಬಸ್ ಸೇರಿ ವಾಹನ ಸಂಚಾರಕ್ಕೆ ಯಾವುದೇ ಷರತ್ತು ವಿಧಿಸಿಲ್ಲ.
ಹೀಗಾಗಲೇ ಕೋರ್ಟ್, ಸರ್ಕಾರದ ಎಲ್ಲ ಇಲಾಖೆಗಳ ಕಚೇರಿ ಕೆಲಸದ ಅವಧಿ ಬದಲಾವಣೆ ಮಾಡಲಾಗಿದೆ. ಸದ್ಯ ಲಾಕ್‌ಡೌನ್ ಮಾಡಿರುವ ಕಾರಣ ಜನರ ಓಡಾಟವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪುರಸಭೆ ಸಿಬ್ಬಂದಿ ಕಸ ವಿಲೇವಾರಿ ವಾಹನದಲ್ಲಿ ಜಾಗೃತಿ ಮೂಡಿಸಿ, ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡುವುದು ಕಂಡುಬಂದಿತು.
ಹೋಟೆಲ್, ಖಾನಾವಳಿ, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ನಿರ್ಬಂದ ಹೇರಿದ್ದರಿಂದ ಜನರು ಕುಡಿವ ನೀರಿಗಾಗಿ ತೀವ್ರ ಪರದಾಡಿದರು. ಇಲ್ಲಿನ ಬಸ್ ನಿಲ್ದಾಣ, ಮಿನಿವಿಧಾನಸೌಧ ಮುಂಭಾಗ, ಕೋರ್ಟ್, ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಎಲ್ಲ ಹೋಟೆಲ್, ಟೀ ಸ್ಟಾಲ್ ಬಂದ್ ಮಾಡಿದ್ದರಿಂದ ನೀರಿಗಾಗಿ ಬಿಕ್ಕಳಿಸುವ ಸ್ಥಿತಿ ಎದುರಾಗಿತ್ತು. ಬಸ್ ನಿಲ್ದಾಣದಲ್ಲಿ ಎಲ್ಲ ಅಂಗಡಿ ಬಂದ್ ಮಾಡಿದ್ದರಿಂದ ಬೇಸಿಗೆಯಲ್ಲಿ ಕುಡಿವ ನೀರು ಸಿಗದೆ ಪ್ರಯಾಣಿಕರು, ಮಹಿಳೆಯರು ಹಾಗೂ ಮಕ್ಕಳು ಸಂಕಷ್ಟ ಎದುರಿಸಿದರು.

ಕೋಟ್
ತಾಲೂಕಿನಲ್ಲಿ ಸರ್ಕಾರದ ಆದೇಶದಂತೆ ಲಾಕ್‌ಡೌನ್ ಜಾರಿ ಮಾಡಿದ್ದು, ಅಗತ್ಯ ವಸ್ತುಗಳಿಗೆ ಬೆಳಗ್ಗೆ ೬ರಿಂದ ಮಧ್ಯಾಹ್ನ ೨ರವರೆಗೆ ಅವಕಾಶವಿದೆ. ಮೆಡಿಕಲ್, ಆಸ್ಪತ್ರೆಗಳು ದಿನದ ೨೪ಗಂಟೆ ಸೇವೆ ಸಲ್ಲಿಸಬಹುದು.
ಮಧುರಾಜ್ ಯಾಳಗಿ, ತಹಸೀಲ್ದಾರ್