ಅಗತ್ಯ ವಸ್ತುಗಳಿಗೆ ತೆರಿಗೆ ಸಿದ್ದು ಟೀಕೆ

ಬೆಂಗಳೂರು, ಜು. ೧೮- ಅಚ್ಛೆದಿನ ಎಂದು ಹೇಳಿಕೊಂಡು ಬಿಜೆಪಿಯವರು ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿದ್ದಾರೆ. ಇದೇನಾ ಬಿಜೆಪಿಯ ಅಚ್ಛೆದಿನ ಎಂದು ವಾಗ್ದಾಳಿ ನಡೆಸಿರುವ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು, ಅಚ್ಛೆದಿನ ಅಂತ ಹೇಳಿಕೊಂಡು ಜನರ ರಕ್ತ ಕುಡಿದಿದ್ದಾರೆ ಎಂದು ಟೀಕಿಸಿದರು.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು, ಬಿಜೆಪಿಯವರು ಜನರಿಗೆ ದೊಡ್ಡ ಅನ್ಯಾಯ, ದ್ರೋಹ ಮಾಡಿದ್ದಾರೆ. ಮೊಸರು, ಮಜ್ಜಿಗೆ, ಲಸ್ಸಿ, ಅಕ್ಕಿ, ಗೋದಿ, ಜೇನುತುಪ್ಪ, ರೈತರ ಹಣ್ಣು, ತರಕಾರಿ ಎಲ್ಲದಕ್ಕೂ ತೆರಿಗೆ ಹಾಕಿದ್ದಾರೆ ಇದು ಮೋದಿಯವರ ಅಚ್ಛೆದಿನದ ಭಾಗನಾ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ರೈತರಿಗೆ ಆದಾಯ ಹೆಚ್ಚಾಗಿಲ್ಲ. ನೌಕರರಿಗೆ ಸಂಬಂಳ ಜಾಸ್ತಿಯಾಗಿಲ್ಲ. ಹೀಗಿರುವಾಗ ಬಡವರು ಬಳಸುವ ವಸ್ತುಗಳ ಮೇಲೆ ಜಿಎಸ್‌ಟಿ ಹಾಕಿ ರಕ್ತಹೀರುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಮೊದಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈಗ ಜಿಎಸ್‌ಟಿ ಹೆಚ್ಚಳ ಮಾಡಿದ್ದಾರೆ. ಜನ ಹೇಗೆ ಜೀವನ ಮಾಡಬೇಕು ಎಂದು ಅವರು ಪ್ರಶ್ನಿಸಿದರು.
ಯುಪಿಎ ಸರ್ಕಾರವಿದ್ದಾಗ ಅಗತ್ಯ ವಸ್ತುಗಳ ಬೆಲೆ ಕಡಿಮೆ ಇತ್ತು. ಈಗ ಡಿಸೇಲ್, ಪೆಟ್ರೋಲ್, ಅಡುಗೆ ಎಣ್ಣೆ ಎಲ್ಲ ಪದಾರ್ಥಗಳ ಬೆಲೆಯೂ ಏರಿದೆ. ಇಷ್ಟಾದರೂ ಬಿಜೆಪಿಯವರು ಅಚ್ಛೆದಿನ ಎಂದು ಹೇಳುತ್ತಿರುವುದು ಅರ್ಥಹೀನ ಎಂದರು.
ದೇಶದ ಆರ್ಥಿಕತೆಯನ್ನು ೫ ಟ್ರಿಲಿಯನ್‌ಗೆ ಕೊಂಡೊಯ್ಯುತ್ತೇವೆ ಎಂದು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಜನರ ಜೇಬಿನಲ್ಲಿ ದುಡ್ಡು ಇಲ್ಲದೆ ಜಿಡಿಪಿ ಬೆಳೆಯಲ್ಲ. ಜನ ತಲೆ ಎತ್ತಿ ಬದುಕದ ಸ್ಥಿತಿಗೆ ಬಿಜೆಪಿಯವರು ದೇಶವನ್ನು ಹಾಳು ಮಾಡಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿ ಸರ್ಕಾರ ಏನೂ ಸಾಧನೆ ಮಾಡದೆ ಸಾಧನಾ ಸಮಾವೇಶ ಮಾಡುತ್ತಿದೆ. ಪಿಎಸ್‌ಐ ಅಕ್ರಮವಾಗಿದೆ. ಶೇ. ೪೦ ಪರ್ಸೆಂಟ್ ಸರ್ಕಾರವಿದೆ. ಹೀಗಿರುವಾಗ ಸಾಧನಾ ಸಮಾವೇಶ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ. ರಾಜ್ಯವನ್ನು ಹಾಳು ಮಾಡಿದವರು ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದರು.
ಎಲ್ಲ ಕಾಲದಲ್ಲೂ ಭ್ರಷ್ಟಾಚಾರ ಇದೆ. ಆದರೆ, ಶೇ. ೪೦ ರಷ್ಟು ಭ್ರಷ್ಟಾಚಾರ ದೂರುಗಳು ಇದೇ ಮೊದಲು. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ತಾವು ಸ್ಪರ್ಧಿಸಲ್ಲ ಎಂದು ಪುನರುಚ್ಚರಿಸಿದ ಸಿದ್ಧರಾಮಯ್ಯ, ರಾಷ್ಟ್ರಪತಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಯಶವಂತಸಿನ್ಹ ಗೆಲ್ಲುವ ವಿಶ್ವಾಸವಿದೆ ಏನಾಗುತ್ತೋ ನೋಡೋಣ ಎಂದರು.
ಡಿಕೆಶಿ ಹೇಳಿಕೆ
ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ತಾವು ಅಧ್ಯಕ್ಷರಾಗಿರುವ ಶಿಕ್ಷಣ ಸಂಸ್ಥೆಗೆ ಬಾಂಬ್ ಬೆದರಿಕೆ ಬಂದಿತ್ತು. ಪೊಲೀಸ್ ಕಮಿಷನರ್ ಜತೆ ಮಾತನಾಡಿದ್ದೇನೆ. ಯಾವುದೇ ತೊಂದರೆಯಾಗಿಲ್ಲ ಎಂದರು.
ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಜಿಎಸ್‌ಟಿ ಹೆಚ್ಚಳ ಮಾಡಿರುವುದನ್ನು ಖಂಡಿಸಿದ ಅವರು, ಈ ಬಗ್ಗೆ ಹೋರಾಟ ನಡೆಸಲು ಇಂದು ಸಂಜೆ ಎಲ್ಲ ಮುಖಂಡರ ಸಭೆ ಕರೆದಿರುವುದಾಗಿ ಹೇಳಿದರು.
ಈ ಸಭೆಯಲ್ಲಿ ಜಿಎಸ್‌ಟಿ ಹೆಚ್ಚಳದ ವಿರುದ್ಧ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುವುದಾಗಿ ಅವರು ಹೇಳಿದರು.