
ಧಾರವಾಡ, ಮಾ.16: ಆರೋಗ್ಯ ಇಲಾಖೆ ಕಾರ್ಯಕರ್ತರು ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯ ಕಾರ್ಯಕರ್ತರು ಮನೆ ಮನೆಗೆ ಸಮೀಕ್ಷೆಗೆ ಬಂದಾಗ ಸಾರ್ವಜನಿಕರು ಸಹಕರಿಸಿ ಮತ್ತು ಅವರು ಕೇಳುವ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಬೇಕು ಎಂದು ಜಿಲ್ಲಾ ಪಂಚಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಹೇಳಿದರು.
ನರೇಂದ್ರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಹಯೋಗದಲ್ಲಿ ಆರಂಭಿಸಿರುವ ಆರೋಗ್ಯ ಮತ್ತು ಪೌಷ್ಠಿಕ ಸಮೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಮೀಕ್ಷೆಯಡಿಯಲ್ಲಿ ಮನೆಗಳಿಗೆ ಒದಗಿಸಿರುವ ಮೂಲಭೂತ ಸೌಕರ್ಯಗಳು, ಆರೋಗ್ಯದ ಬಗ್ಗೆ ಜಾಗೃತಿ, ಕುಟುಂಬದಲ್ಲಿನ ಸದಸ್ಯರಿಗೆ ಇರುವ ರೋಗಗಳ ಮಾಹಿತಿ 0 ದಿಂದ 10 ವರ್ಷಕ ಮಕ್ಕಳ ಬಗ್ಗೆ ಮಾಹಿತಿ, ಕಿಶೋರ ಮತ್ತು ಕಿಶೋರಿಯರ ಆರೋಗ್ಯದ ಕುರಿತು ಮಾಹಿತಿ, ವಿವಾಹಿತ ಮಹಿಳೆ, ಬಾಣಂತಿ ಹಾಗೂ ಗರ್ಭೀಣಿಯರ ಅರೋಗ್ಯದ ಬಗ್ಗೆ ಮಾಹಿತಿಯನ್ನು ಕ್ರೋಡೀಕರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇದೊಂದು ಬಹುಮುಖ್ಯ ಸಮೀಕ್ಷೆಯಾಗಿರುವದರಿಂದ ಸಾರ್ವಜನಿಕರು ಸಹಕಾರದೊಂದಿಗೆ ಅಗತ್ಯ ಮಾಹಿತಿ ನೀಡಬೇಕು. ಇದರಿಂದ ಜಿಲ್ಲೆಯ ಆರೋಗ್ಯದ ಗುಣಮಟ್ಟ ಹಾಗೂ ಅಗತ್ಯ ಸೇವೆಗಳ ಬಗ್ಗೆ ಕ್ರಿಯಾಯೋಜನೆ ರೂಪಿಸಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಟೀಲ ಶಶಿ ಅವರು ಮಾತನಾಡಿ, ಆರೋಗ್ಯ ಕಾರ್ಯಕರ್ತರು ಮನೆಗೆ ಭೇಟಿ ನೀಡುವ ಮೊದಲೇ ಮನೆಯ ಮುಖ್ಯಸ್ಥರಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇಟ್ಟುಕೊಂಡು ಅವರು ಬಂದಾಗ ಮಾಹಿತಿ ನೀಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿ ಡಾ.ಎಸ್.ಎಮ್. ಹೊನಕೇರಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ತನುಜಾ ಕೆ.ಎನ್. ಹಾಗೂ ಇನ್ನಿತರ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.