ಅಗತ್ಯ ಕರೆಗಳ ತಡೆ ಟ್ರಾಯ್‌ನಿಂದ ಹೊಸ ನಿಯಮ

ನವದೆಹಲಿ,ಮೇ,೨- ಅಪರಿಚಿತ ಸಂಖ್ಯೆಗಳಿಂದ ಅನಗತ್ಯ ಕರೆಗಳು ಮತ್ತು ಸಂದೇಶಗಳ ಕಿರಿಕಿರಿ ನಿವಾರಣೆಗಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣಾಲಯ-ಟ್ರಾಯ್ ಹೊಸ ನಿಯಮ ಜಾರಿ ಮಾಡಿದೆ.

ಒಳಬರುವ ಕರೆ ಮತ್ತು ಸಂದೇಶಗಳಿಗೆ ಅನ್ವಯವಾಗುವಂತೆ ಹೊಸ ನಿಯಮ ಜಾರಿಗೆ ಬಂದಿದ್ದು ಸ್ಪ್ಯಾಮ್ ಕರೆಗಳಿಂದ ಪರಿಹಾರ ನೀಡಲಿದ್ದು ಗ್ರಾಹಕರು ಅನಗತ್ಯ ಕಿರಿಕಿರಿಯಿಂದ ದೂರ ಇರಬಹುದು ಎಂದು ಹೇಳಿದೆ.

ಹೊಸ ನಿಯಮಗಳ ಪ್ರಕಾರ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ಕರೆ ಮತ್ತು ಎಸ್ ಎಂಎಸ್ ಸೇವೆಗಳಲ್ಲಿ ಎಐನಲ್ಲಿ ಸ್ಪ್ಯಾಮ್ ಫಿಲ್ಟರ್ ಬಳಸಬೇಕಾಗುತ್ತದೆ. ಗ್ರಾಹಕರನ್ನು ವಂಚನೆ ಮತ್ತು ಕಿರುಕುಳದಿಂದ ರಕ್ಷಿಸಲು ಭಾರತದಲ್ಲಿನ ಟೆಲಿಕಾಂ ನಿಯಂತ್ರಕ ಟ್ರಾಯ್ ತೆಗೆದುಕೊಂಡ ಪ್ರಮುಖ ಹೆಜ್ಜೆ ಇದಾಗಿದೆ.

ಟೆಲಿಕಾಂ ಕಂಪನಿಗಳಾದ ಏರ್ ಟೆಲ್, ಜಿಯೋ, ವೋಡೋ ಪೋನ್, ಐಡಿಯಾ ಮತ್ತು ಬಿಎಸ್ ಎನ್ ಎಲ್ ತಮ್ಮ ಕರೆ ಮತ್ತು ಎಸ್‌ಎಂಎಸ್ ಸೇವೆಗಳಿಗೆ ಕೃತಕ ಬುದ್ಧಿಮತ್ತೆ ಸ್ಪ್ಯಾಮ್ ಫಿಲ್ಟರ್ ಬಳಸುವುದು ಕಡ್ಡಾಯವಾಗಿದೆ.

ನಕಲಿ ಮತ್ತು ಪ್ರಚಾರದ ಕರೆಗಳು ಮತ್ತು ಸಂದೇಶ ಗುರುತಿಸುತ್ತದೆ ಮತ್ತು ನಿರ್ಬಂಧಿಸುತ್ತದೆ, ವಂಕಚಕರು ಹಣ ವಂಚಿಸಲು ಹೆಚ್ಚಾಗಿ ಬಳಸುತ್ತಾರೆ. ಸ್ಪ್ಯಾಮ್‌ಗಳ ಹೆಚ್ಚುತ್ತಿರುವ ಪ್ರಕರಣಗಳು ಮತ್ತು ಗ್ರಾಹಕರಿಗೆ ಇಂತಹ ಕರೆಗಳು ಮತ್ತು ಸಂದೇಶಗಳಿಂದ ಉಂಟಾಗುವ ತೊಂದರೆ ತಪ್ಪಿಸಲು ಸಹಕಾರಿಯಾಗಲಿದೆ.

ಆದೇಶದ ನಂತರ, ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಎಐ ಫಿಲ್ಟರ್ ಸೇವೆ ಜಾರಿಗೆ ತರಲು ಒಪ್ಪಿಕೊಂಡಿವೆ. ಏರ್‍ಟೆಲ್ ಅಧಿಕೃತ ಹೇಳಿಕೆಯಲ್ಲಿ ಖಚಿತಪಡಿಸಿದ್ದು ಆದರೆ ಜಿಯೋ ಶೀಘ್ರದಲ್ಲೇ ಸೇವೆ ಪ್ರಾರಂಭಿಸುವ ನಿರೀಕ್ಷೆಯಿದೆ.

ನಕಲಿ ಕರೆಗಳು ಮತ್ತು ಸಂದೇಶಗಳ ಸಮಸ್ಯೆ ನಿಗ್ರಹಿಸಲು, ೧೦-ಅಂಕಿಯ ಮೊಬೈಲ್ ಸಂಖ್ಯೆಗಳಿಗೆ ಪ್ರಚಾರದ ಕರೆ ಕಳುಹಿಸುವುದನ್ನು ನಿಲ್ಲಿಸಲು ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕಾಲರ್ ಐಡಿ ತನ್ನಿ

ಗ್ರಾಹಕರು ತಮ್ಮ ಫೊಟೋ ಮತ್ತು ಹೆಸರನ್ನು ಮೊಬೈಲ್ ಫೊನ್ ಪರದೆಯಲ್ಲಿ ತೋರಿಸುವ ಮೂಲಕ ಕರೆ ಮಾಡುವವರನ್ನು ಗುರುತಿಸಲು ಸಹಾಯ ಮಾಡುವ ಕಾಲ್ ಐಡಿ ವೈಶಿಷ್ಟ್ಯವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ,ದೂರಸಂಪರ್ಕ ಸೇವಾ ಪೂರೈಕೆದಾರರಿಗೆ ಸೂಚನೆ ನೀಡಿದೆ.
ಏರ್‌ಟೆಲ್ ಮತ್ತು ಜಿಯೋದಂತಹ ಟೆಲಿಕಾಂ ಕಂಪನಿಗಳು ಗೌಪ್ಯತೆ ಕಾರಣಗಳಿಗಾಗಿ ಈ ತಂತ್ರಜ್ಞಾನ ಬಳಸಲು ಹಿಂಜರಿಯುತ್ತವೆ. ಆದರೂ ಈ ಘೋಷಣೆಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ಈಗಿನಂತೆ, ಸ್ಪ್ಯಾಮ್ ಅನ್ನು ಫಿಲ್ಟರ್ ಮಾಡಲು ಎಐ ತಂತ್ರಜ್ಞಾನದ ಅನುಷ್ಠಾನ ಜಾರಿಯಾಗಿದೆ.