‘ಅಗತ್ಯಸೇವೆ’ಗಳಿಗೆ ಅವಕಾಶ-ಅಂಗಡಿ ಮುಂಗಟ್ಟು ಬಂದ್

ಪುತ್ತೂರು, ಎ.೨೪-  ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಅಬ್ಬರವನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರದ ಸೂಚನೆ ಮೇರೆಗೆ ಪುತ್ತೂರು ತಾಲೂಕಿನ ಪೇಟೆಗಳಲ್ಲಿನ ಅಗತ್ಯಸೇವೆಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಯಿತು.

ಪುತ್ತೂರು ತಾಲೂಕು ಆಡಳಿತ, ನಗರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿ ಪುತ್ತೂರು ಬೊಳುವಾರು ಭಾಗದಿಂದ ದರ್ಭೆ ತನಕ ಬಟ್ಟೆ ಅಂಗಡಿ, ಇಲೆಕ್ಟ್ರಾನಿಕ್ ಅಂಗಡಿಗಳನ್ನು ಬಂದ್ ಮಾಡಿದರು. ಅಗತ್ಯ ಸೇವೆಗಳಾದ ದಿನಸಿ, ಹಾಲು, ಹಣ್ಣು ತರಕಾರಿ, ಮಾಂಸದ ಅಂಗಡಿ, ಹೋಟೆಲ್ ಮತ್ತಿತರ ಅಂಗಡಿಗಳಿಗೆ ಬಂದ್‌ನಿಂದ ವಿನಾಯತಿ ನೀಡಲಾಯಿತು. . ಸಹಕಾರಿ ಬ್ಯಾಂಕ್‌ಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳು ಹಾಗೂ ಸರಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದವು.

ಸಾರಿಗೆ ನಿಯಂತ್ರಣ

ಶನಿವಾರ ಮತ್ತು ಭಾನುವಾರ ಕರ್ಫ್ಯೂ ಆದೇಶ ಜಾರಿಯಲ್ಲಿರುವುದರಿಂದ ಬೆಳಗ್ಗಿನಿಂದ ರಾತ್ರಿ ೯ರವರೆಗೆ ಮಾತ್ರ ಕೆಎಸ್ಸಾರ್ಟಿಸಿ ಬಸ್‌ಗಳ ಓಡಾಟ ವ್ಯವಸ್ಥೆಯನ್ನು ಮಾಡಲಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ತಂಗುವ ಎಲ್ಲಾ ಬಸ್‌ಗಳನ್ನು ಕರ್ಫ್ಯೂ ಹಿನ್ನೆಲೆಯಲ್ಲಿ ಓಡಾಟ ಸ್ಥಗಿತಗೊಳಿಸಲಾಗಿತ್ತು.  ಶುಕ್ರವಾರ ಸಂಜೆ ಗ್ರಾಮೀಣ ಪ್ರದೇಶಕ್ಕೆ ಬಸ್‌ಗಳು ತೆರಳಿದರೆ ಅವುಗಳು ಸೋಮವಾರ ಬೆಳಗ್ಗೆಯಷ್ಟೇ ಅಲ್ಲಿಂದ ಹೊರಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ೪೮ ಗಂಟೆಗಳ ಕಾಲ ಬಸ್‌ಗಳು ಗ್ರಾಮೀಣ ಪ್ರದೇಶದಲ್ಲಿ ತಂಗುವ ಬದಲು ಈ ಪ್ರದೇಶದ ಸಂಜೆಯ ವೇಳೆಯ ಬಸ್ ಓಡಾಟಗಳನ್ನು ಸೋಮವಾರದವರೆಗೆ ಸ್ಥಗಿತಗೊಳಿಸಲಾಗಿದೆ.

ಕಟ್ಟುನಿಟ್ಟಿನ ಸೂಚನೆ

ಕೊರೋನಾ ಮುನ್ನೆಚರಿಕೆ ಕ್ರಮಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಪಾಲನೆಗಾಗಿ ಪೊಲೀಸ್ ಮತ್ತು ಕಂದಾಯ ಇಲಾಖೆ ನೇರ ಕಾರ್ಯಾಚರಣೆಗೆ ಇಳಿದಿದೆ. ಬಸ್ ನಿಲ್ದಾಣ ಹೊರತಾಗಿ ಬೇರೆಲ್ಲಿಯೂ ಜನಸಂದಣಿ ಸೇರದಂತೆ ಪೊಲೀಸರು ತಡೆಯುತ್ತಿದ್ದರು. ಈ ಕುರಿತಂತೆ ಈಗಾಗಲೇ ಪೊಲೀಸರು ಮತ್ತು ನಗರಸಭೆಯವರು ಧ್ವನಿವರ್ದಕದ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್, ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ನೇತೃತ್ವದಲ್ಲಿ ಅಂಗಡಿಗಳನ್ನು ಬಂದ್ ಮಾಡುವ ಕೆಲಸ ನಡೆಯಿತು. ಪುತ್ತೂರು ತಾಲೂಕಿನ ಎರಡನೇ ದೊಡ್ಡ ಪೇಟೆಯಾಗಿರುವ ಉಪ್ಪಿನಂಗಡಿಯಲ್ಲೂ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದ ಅಂಗಡಿ-ಮುಂಗಟ್ಟುಗಳನ್ನು ಗ್ರಾಪಂ ಆಡಳಿತ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಬಂದ್ ಮಾಡಲಾಯಿತು.

ಅಂತರ್‌ರಾಜ್ಯ ಗಡಿ ಬಂದ್

ಕಾಸರಗೋಡು ತಾಲೂಕಿನಿಂದ ಪುತ್ತೂರು ತಾಲೂಕನ್ನು ಸಂಪರ್ಕಿಸುವ ಕೊಟ್ಯಾಡಿ ಮತ್ತು ಗಾಳಿಮುಖಗಳಲ್ಲಿ ದ.ಕ. ಜಿಲ್ಲಾಧಿಕಾರಿಗಳ ಆದೇಶದಂತೆ ಕಂದಾಯ ಮತ್ತು ಪೊಲೀಸ್ ಇಲಾಖೆ ರಸ್ತೆ ಗಡಿ ಬಂದ್ ಮಾಡಿದೆ. ಶುಕ್ರವಾರ ಮಧ್ಯಾಹ್ನದ ಬಳಿಕ ನಾಕಾ ಬಂದ್ ಏರ್ಪಡಿಸಲಾಗಿದೆ. ಹಾಲು, ತರಕಾರಿ, ದಿನಸಿ ಸಾಮಾಗ್ರಿ, ಆಂಬುಲೆನ್ಸ್ ಸೇರಿದಂತೆ ಅಗತ್ಯ ವಸ್ತುಗಳು ಮತ್ತು ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಈಶ್ವರಮಂಗಲ ಗ್ರಾಮ ಪಂಚಾಯತ್ ಸದಸ್ಯ ಶ್ರೀರಾಮ್ ಪಕ್ಕಳ ಮಾಹಿತಿ ತಿಳಿಸಿದ್ದಾರೆ.