ಅಖಿಲ ಭಾರತ ವೀರಶೈವ ಮಹಾಸಭೆಗೆ 27ಕ್ಕೆ ಚುನಾವಣೆ

ಗಂಗಾವತಿ, ನ,06: ಅಖಿಲ ಭಾರತ ವೀರಶೈವ ಮಹಾಸಭಾಯ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಘಟಕಗಳಿಗೆ ನವೆಂಬರ್ 27 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣೆ ಅಧಿಕಾರಿ ಎಚ್.ಎಂ.ರೇಣುಕ ಪ್ರಸನ್ನ ಹೇಳಿದರು.
ನಗರದ ಚನ್ನಬಸವ ಸ್ವಾಮಿ ಮಂಟಪದಲ್ಲಿ ಗುರುವಾರ ಮಧ್ಯಾಹ್ನ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ರಾಜ್ಯದಲ್ಲಿ 12 ಜಿಲ್ಲೆ ಮತ್ತು 106 ತಾಲೂಕು ಘಟಕಗಳಿಗೆ ಚುನಾವಣೆ ನಡೆದಿದ್ದು, ಉಳಿದ ಜಿಲ್ಲೆ ಮತ್ತು ತಾಲೂಕು ಘಟಕಗಳಿಗೆ ನಿಯಮಗಳ ಪ್ರಕಾರ ಚುನಾವಣೆ ನಡೆಯಲಿದೆ ಎಂದರು.
ಸದಸ್ಯರಾಗಲು ನ.10 ಕೊನೆಯ ದಿನವಾಗಿದ್ದು, ನ.9 ರಿಂದ ನ.15 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ನ.16ರಂದು ನಾಮಪತ್ರ ಪರಿಶೀಲನೆ, ನ.19ರಂದು ಮಧ್ಯಾಹ್ನ 3 ಗಂಟೆ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ನ.27ರಂದು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ಅದೇ ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ರೇಣುಕ ಪ್ರಸನ್ನ ಮಾಹಿತಿ ನೀಡಿದರು.
ಪ್ರತಿ ಜಿಲ್ಲೆಗೆ 1 ಸಾವಿರ ಹಾಗೂ ಪ್ರತಿ ತಾಲೂಕಿಗೆ 300 ಸದಸ್ಯರು ಇದ್ದರೆ ಚುನಾವಣೆ ನಡೆಸಬಹುದು. ಕೊಪ್ಪಳ ಜಿಲ್ಲಾ ಘಟಕದಲ್ಲಿ 230 ಮತದಾರರಿದ್ದು, ಇನ್ನೂ 770 ಸದಸ್ಯರು ನೊಂದಣಿಯಾದರೆ ಮಾತ್ರ ಜಿಲ್ಲಾ ಘಟಕವು ಚುನಾವಣೆಗೆ ಅರ್ಹತೆ ಪಡೆಯಲಿದೆ. ಅಲ್ಲದೇ, ಯಲಬುರ್ಗಾ ತಾಲೂಕಿನಲ್ಲಿ 130 ಸದಸ್ಯರು ಮತ್ತು ಕುಷ್ಟಗಿ ತಾಲೂಕಿನಲ್ಲಿ 118 ಸದಸ್ಯರಿದ್ದು, ಅಗತ್ಯ ಸದಸ್ಯರು ನೋಂದಣಿಯಾದರೆ ಮಾತ್ರ ಮೂರು ಘಟಕಗಳಿಗೆ ಚುನಾವಣೆ ನಡೆಯಲಿದೆ ಎಂದರು.
ಈ ನಿಟ್ಟಿನಲ್ಲಿ ಮಹಾಸಭಾ ಘಟಕಕ್ಕೆ ಸದಸ್ಯರಾಗದೇ ಇರುವ ಸಮಾಜಬಾಂಧವರಿಗೆ ಸದಸ್ಯರಾಗುವಂತೆ ಮನವಿ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಕೊಪ್ಪಳ ಜಿಲ್ಲಾಧ್ಯಕ್ಷ ಕಳಕನಗೌಡ ಮಾಲಿ ಪಾಟೀಲ ಕಲ್ಲೂರು, ಮಹಾಂತೇಶ ಸಜ್ಜನ್ನ, ಚನ್ನಪ್ಪ ಮಳಗಿ, ವಾಗೀಶ ಹಿರೇಮಠ, ಶಿವಾನಂದ ಮೇಟಿ, ದೇಸಾಯಿ ಗೌಡ ಪಾಟೀಲ ಸೇರಿ ಇತರರಿದ್ದರು.