ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ಭೀಮಳ್ಳಿ ಗ್ರಾಪಂ ಎದುರು ಪ್ರತಿಭಟನೆ

ಕಲಬುರಗಿ,ಜು.28- ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನೆನಪಿನಾರ್ಥವಾಗಿ ಈ ವರ್ಷ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವವನ್ನು ಆಚರಿಸಲು ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಇದೆ ಸಂದರ್ಭದಲ್ಲಿ ನಮ್ಮ ದೇಶದ ರೈತರ ಕಾರ್ಮಿಕರ ಮತ್ತು ದುಡಿಯುವ ಜನಗಳ ಬದುಕು ಅತ್ಯಂತ ಹೀನಾಯ ಸ್ಥಿತಿಗೆ ತಲುಪುವಂತೆ ಮಾಡುವ ಎಲ್ಲಾ ರೀತಿಯ ನೀತಿಗಳು ಜಾರಿಗೆ ಬರುತ್ತಿರುವುದು ಜನರಲ್ಲಿ ಆತಂಕ ಮೂಡಿಸುತ್ತಿದೆ ಎಂದು ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ಮಹೇಶ್ ಎಸ್. ಬಿ ಮತ್ತು ವಿಶ್ವನಾಥ ಸಿಂಘೆ ಅವರು ದೂರಿದ್ದಾರೆ.
ಆಹಾರ ಪದಾರ್ಥಗಳ ಮತ್ತು ಕೃಷಿ ಸಲಕರಣೆಗಳ ಮೇಲೆ ವಿಧಿಸಿರುವ ಜಿ. ಎಸ್. ಟಿ ಯನ್ನು ಹಿಂತೆಗೆದುಕೊಳ್ಳಿ. ವಿದ್ಯುತ್ ಮಸೂದೆ 2021ನ್ನು ರದ್ದು ಗೊಳಿಸಿ. ಕನಿಷ್ಠ ಬೆಂಬಲ ಬೆಲೆ (ಒSP) ಯನ್ನು ಖಾತ್ರಿ ಪಡಿಸಿ. ರೈತರ ಹಿತಾಸಕ್ತಿ ಕಡೆಗಣಿಸಿರುವಂತ ಜನರಿಂದ ರೂಪಿಸಲ್ಪಟ್ಟಿರುವ ಕನಿಷ್ಠ ಬೆಂಬಲ ಬೆಲೆ ಸಮಿತಿಯನ್ನು ಈ ಕೂಡಲೇ ವಿಸರ್ಜಿಸಬೇಕು ಎಂದು ಅವರು ಒತ್ತಾಯಿಸಿ ತಾಲೂಕಿನ ಭೀಮಳ್ಳಿ ಗ್ರಾಮ ಪಂಚಾಯತ ಎದುರು ಪ್ರತಿಭಟನಾ ಪ್ರದರ್ಶನ ಕೈಗೊಂಡು ಪಂಚಾಯತ ಮೂಲಕ ಪ್ರದಾನ ಮಂತ್ರಿಗಳಿಗೆ ಬೇಡಿಕೆಯ ಮನವಿ ಸಲ್ಲಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಬೆಳೆಗಳು ಗಗನಕ್ಕೇರುತಿದ್ದು, ತಮ್ಮ ಜೀವನ ನಡೆಸಲು ಸಾಮಾನ್ಯ ಜನರು ಹೆಣಗಾಡುವಂತಾಗಿದೆ. ರೈತರಿಗೆ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿದ್ದ ಸಬ್ಸಿಡಿಯನ್ನು ನಿಲ್ಲಿಸುತ್ತಿರುವುದು ಸಂಕಷ್ಟದಲ್ಲಿರುವ ಜನರ ಮೇಲೆ ಬರೆ ಎಳೆದಂತಾಗಿದೆ. ಇತ್ತೀಚೆಗೆ ಯಶಸ್ವಿಯಾಗಿ ಸಂಘಟಿಸಿದ ರೈತ ಚಳುವಳಿಯ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ಈ ದೇಶದ ರೈತರಿಗೆ ಬೆಂಬಲ ಬೆಲೆ ನಿಗದಿಪಡಿಸಲು ಕಾನೂನು ಮಾಡುತ್ತೇವೆ ಎಂಬ ಭರವಸೆ ನೀಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿ ಪಡಿಸಲು ರಚಿಸಿರುವ ಸಮಿತಿಗೆ ರೈತ ವಿರೋಧಿ ನಿಲುವು ತೆಗೆದುಕೊಂಡಿದ್ದವರನ್ನು ಆಯ್ಕೆ ಮಾಡಿದ್ದು ಕೇಂದ್ರ ಸರ್ಕಾರದ ಬಗ್ಗೆ ಜನರಲ್ಲಿ ಇದ್ದ ಸ್ವಲ್ಪ ನಂಬಿಕೆಯನ್ನು ಹುಸಿಯಾಗಿಸುವಂತೆ ಮಾಡಿದೆ.
ಇದರ ಜೊತೆಗೆ ವಿದ್ಯುತ್ ಮಸೂದೆ 2021, ಆಹಾರ ಪದಾರ್ಥಗಳ ಮೇಲೆ ವಿಧಿಸಿರುವ ಶೇ 5 ರಷ್ಟು ಜಿ.ಎಸ್.ಟಿ. ಹೇರಿಕೆ, ಕೃಷಿ ಉಪಕರಣಗಳ ಮೇಲಿನೆ ತೆರಿಗೆ ಹೆಚ್ಚಳ ಸೇರಿದಂತೆ ಕೇಂದ್ರ ಸರ್ಕಾರದ ಹಲವಾರು ನೀತಿಗಳು ಜನರ ಬದುಕನ್ನು ನಿರಾಸರೆಯಾಗಿಸಿವೆ. ಆದ್ದರಿಂದ ತಾವುಗಳು ಜನರ ಸಂಕಷ್ಟಗಳ ಬಗ್ಗೆ ಆದಷ್ಟು ಬೇಗ ಸಕಾರಾತ್ಮಕವಾಗಿ ಸ್ಪಂದಿಸಿ ಈ ಕೆಳಗಿನ ಬೇಡಿಕೆಗಳನ್ನು ಹಿಡೇರಿಸಬೇಕಾಗಿ ಸಂಘಟನೆ ಮನವಿ ಮಾಡಿಕೊಂಡಿದೆ.