ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬಲವರ್ಧನೆಗೆ ನ್ಯಾ.ಎನ್. ಕುಮಾರ್ ಕರೆ

ಕೋಲಾರ,ನ.೮- ವಿಪ್ರ ಸಮುದಾಯದ ಭವಿಷ್ಯ ಹಾಳು ಮಾಡುತ್ತಿರುವವ ಒಂದು ಗುಂಪಿನ ಕಪಿಮುಷ್ಠಿಯಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವನ್ನು ಹೊರ ತಂದು ಸದೃಢಶಕ್ತಿಯಾಗಿಸುವ ನಮ್ಮ ಪ್ರಯತ್ನಕ್ಕೆ ಕೈಜೋಡಿಸಿ ಎಂದು ಜಿಲ್ಲೆಯ ಬ್ರಾಹ್ಮಣರಿಗೆ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಕರೆ ನೀಡಿದರು.
ಕೋಲಾರ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ನಗರದ ಗಾಯತ್ರಿ ಮಂದಿರದಲ್ಲಿ ನಡೆದ ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ರಘುನಾಥ್ ಅವರಿಗೆ ಮತಯಾಚಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಹಾಸಭಾವನ್ನು ಪಿತ್ರಾರ್ಜಿತ ಆಸ್ತಿಯೆಂದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಾಸಭಾ ಬಲಿಷ್ಟವಾದರೆ ಬ್ರಾಹ್ಮಣರು ಯಾರ ಮುಂದೆಯೂ ತಲೆತಗ್ಗಿಸಿ ನಿಲ್ಲುವ ಅಗತ್ಯವಿಲ್ಲ, ಪ್ರಾಮಾಣಿಕರಾದ ರಘುನಾಥ್ ಅವರಿಗೆ ಅವಕಾಶ ಸಿಕ್ಕರೆ ದಶಕದಲ್ಲಿ ಮತ್ತೆ ಗತವೈಭವ ಕಾಣಲಿದೆ ಎಂದು ಭರವಸೆ ನೀಡಿದರು.
ಕೇವಲ ಪದಾಧಿಕಾರಿಗಳಾದವರಿಗೆ ಮಾತ್ರವೇ ಮತ್ತೆ ಚುನಾವಣೆಗೆ ನಿಲ್ಲುವ ಅವಕಾಶವಿರುವ ಪ್ರಜಾಪ್ರಭುತ್ವಕ್ಕೆ ವಿರುದ್ದವಾದ ಮಹಾಸಭಾ ಬೈಲಾ ತಿದ್ದುಪಡಿ ಮಾಡಿ ಪ್ರತಿ ಸದಸ್ಯನಿಗೂ ಸ್ವರ್ಧಿಸುವ ಮತ್ತು ಅನ್ಯಾಯವನ್ನು ಪ್ರಶ್ನಿಸುವ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.
೫೦ ಸಾವಿರ ಕುಟುಂಬಕ್ಕೆ ದ್ರೋಹ
ಇಂದು ಮಹಾಸಭಾದಲ್ಲಿ ರಾಘವೇಂದ್ರ ಕೋ.ಆಪರೇಟೀವ್ ಬ್ಯಾಂಕಿನಿಂದ ಸಾಲ ಪಡೆದು ವಂಚಿಸಿರುವ ಮತ್ತು ವಂಚಿಸಿದವರಿಗೆ ರಕ್ಷಣೆ ನೀಡುತ್ತಿರುವವರೇ ಅಧಿಕಾರ ನಡೆಸಿದ್ದಾರೆ, ಬ್ಯಾಂಕಿನಲ್ಲಿ ಹಣವಿಟ್ಟು ಕಳೆದುಕೊಂಡ ೯೩ ಮಂದಿ ಜೀವ ಕಳೆದುಕೊಂಡಿದ್ದಾರೆ, ಈ ಕುರಿತು ಈವರೆಗೂ ಮಹಾಸಭಾದ ಯಾವೊಬ್ಬ ಪದಾಧಿಕಾರಿಯೂ ತುಟಿ ಬಿಚ್ಚಿಲ್ಲ ಎಂದು ಖಂಡಿಸಿದರು.
ಬ್ರಾಹ್ಮಣರ ಬ್ಯಾಂಕ್ ಎಂಬ ನಂಬಿಕೆಯಿಂದ ಬೇರೆಯವರೂ ದುಡ್ಡು ಇಟ್ಟಿದ್ದಾರೆ, ಇಲ್ಲಿ ನಡೆದಿರುವ ವಂಚನೆಯಿಂದ ೫೦ ಸಾವಿರ ಕುಟುಂಬಗಳಿಗೆ ಅನ್ಯಾಯವಾಗಿದೆ, ಮಹಾಸಭಾವನ್ನು ಪಾರ್ಟ್‌ಟೈಂ ಜಾಬ್ ಆಗಿಸಿಕೊಂಡಿರುವವರನ್ನು ದೂರವಿಟ್ಟು, ಮಹಾಸಭಾ ಹಾಗೂ ಬ್ರಾಹ್ಮಣರಿಗಾಗಿ ದಿನಪೂರ್ತಿಕೆಲಸ ಮಾಡುವವರನ್ನು ಆಯ್ಕೆ ಮಾಡೋಣ ಎಂದರು.
ಪದಾಧಿಕಾರಿಗಳ ವರ್ತನೆಗೆ ಖಂಡನೆ:

ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ,ಕೋವಿಡ್ ಸಂದರ್ಭದಲ್ಲಿ ಸಣ್ಣಪುಟ್ಟ ಜಾತಿಗಳು ತಮ್ಮ ಸಮುದಾಯದ ಕೈಹಿಡಿಯುವ ಪ್ರಯತ್ನ ಮಾಡಿತು ಆದರೆ ಬ್ರಾಹ್ಮಣ ಮಹಾಸಭಾ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿ, ಇದರ ಪುನಶ್ಚೇತನಕ್ಕೆ ಇದು ಸಕಾಲ ಎಂದರು.
೪೪ ಉಪಜಾತಿಗಳಿವೆ, ಎಲ್ಲರಿಗೂ ಕೋವಿಡ್ ಸಂದರ್ಭದಲ್ಲಿ ಮಂಡಳಿಯಿಂದ ಮೊದಲ ಅಲೆಯಲ್ಲಿ ೪೮ ಸಾವಿರ, ಎರಡನೇ ಅಲೆಯಲ್ಲಿ ೭೨ ಸಾವಿರ ದಿನಸಿ ಕಿಟ್ ವಿತರಿಸಿದ್ದಾಗಿ ತಿಳಿಸಿದರು.
ಮೋದಿ ನೀಡಿದ ಶೇ.೧೦ ಮೀಸಲಾತಿ ಪಡೆಯಲು ಜಾತಿಪ್ರಮಾಣ ಪತ್ರ ಮಹಾಸಭಾ ಏಕೆ ಕೇಳಲಿಲ್ಲ ಎಂದು ಪ್ರಶ್ನಿಸಿದ ಅವರು, ಸಮುದಾಯಕ್ಕೆ ಸರ್ಕಾರದ ಸವಲತ್ತು ತಲುಪಿಸಲು ಸಂಘ ಸದೃಢವಾಗಿರಬೇಕು ಆದರೆ ಈಗ ಅದು ಕೆಲವರ ಆಸ್ತಿಯಾಗಿದೆ ಎಂದು ಟೀಕಿಸಿದರು.
ಸಾಂಧೀಪನಿ ಶಿಕ್ಷಣ ಯೋಜನೆಯಡಿ ೧೩ ಕೋಟಿ ರೂ ವಿದ್ಯಾರ್ಥಿವೇತನ,ವಿಶ್ವಮಿತ್ರ ಪುರಸ್ಕಾರ, ಪುರುಷೋತ್ತಮ ಉದ್ಯೋಗ ಯೋಜನೆ, ಹಸು ಸಾಲ ಸೇರಿದಂತೆ ವಿವಿಧ ಯೋಜನೆಗಳ ಜಾರಿ ಮಾಡಿರುವುದಾಗಿ ತಿಳಿಸಿದರು.
ನಟ ಚೇತನ್ ಬ್ರಾಹ್ಮಣರ ಅವಹೇಳನ ಮಾಡಿದಾಗ ಮಹಾಸಭಾ ಎಲ್ಲಿತ್ತು? ನಾನು ೭೩ ಕಡೆ ಕೇಸ್ ಹಾಕಿಸಿದ್ದೇನೆ, ಪೊಗರು ಚಿತ್ರದಲ್ಲಿನ ಸೀನ್‌ಗೆ ಕತ್ತರ ಹಾಕಿಸಲು ಶ್ರಮಿಸಿದ್ದೇವೆ, ಮಹಾಸಭಾ ಕ್ರಿಯಾಶೀಲವಾಗಿಲ್ಲ, ಈಗ ರಘುನಾಥ್ ಮೂಲಕ ನಿದ್ರೆಯಲ್ಲಿರುವ ಸಮುದಾಯವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
೨೩ ಅಂಶಗಳ ಪ್ರಣಾಳಿಕೆ-ಬಿಡುಗಡೆ:
ಅಭ್ಯರ್ಥಿ ರಘುನಾಥ್ ಮಾತನಾಡಿ, ೨೩ ಅಂಶಗಳ ಚುನಾವಣಾ ಪ್ರಣಾಳಿಕೆ ನೀಡಿದ್ದೇನೆ ಅದರಂತೆ ನಡೆಯುತ್ತೇನೆ, ಸಮುದಾಯದ ಏಳ್ಗೆಗೆ ಹಗಲಿರುಳು ಶ್ರಮಿಸುವ ಸಂಕಲ್ಪ ನನ್ನದಾಗಿದೆ, ರಾಜ್ಯದಲ್ಲಿ ೪೧ ಲಕ್ಷಕ್ಕೂ ಹೆಚ್ಚು ಬ್ರಾಹ್ಮಣರಿದ್ದಾರೆ, ಆದರೆ ೪೦ ಸಾವಿರ ಸದಸ್ಯತ್ವ ಇದೆ, ಜಯನಗರ,ಬಸವನಗುಡಿ,ಪದ್ಮನಾಭ ನಗರಕ್ಕೆ ಸೀಮಿತಮಾಡದೇ ರಾಜ್ಯದ ೩೧ ಜಿಲ್ಲೆಗಳ ಬ್ರಾಹ್ಮಣರಿಗೆ ಮಹಾಸಭಾದ ಸದಸ್ಯತ್ವ ಸಿಗುವಂತೆ ಮಾಡಿ ಪ್ರತಿ ಸದಸ್ಯನಿಗೂ ಚುನಾವಣೆಗೆ ಸ್ಪರ್ಧಿಸುವಂತೆ ಬೈಲಾ ತಿದ್ದುಪಡಿ ಮಾಡುವುದಾಗಿ ತಿಳಿಸಿದರು.
ಮಹಾಸಭಾವನ್ನು ಕೇವಲ ಸ್ವಾರ್ಥಕ್ಕಾಗಿ ಬಳಸಿಕೊಂಡು ಸಮುದಾಯವನ್ನು ಕಡೆಗಣಿಸಿರುವ ವ್ಯಕ್ತಿಗಳಿಂದ ಬಿಡುಗಡೆಗೊಳಿಸಿ, ಪ್ರತಿ ಬ್ರಾಹ್ಮಣನ ನೆರವಿಗೆ ನಿಲ್ಲುವ ರೀತಿ ಬಲಗೊಳಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಲಾರ ಬ್ರಾಹ್ಮಣ ಸಂಘದ ಅಧ್ಯಕ್ಷ ಬಿ.ಎನ್.ವಾಸುದೇವ ಮೂರ್ತಿ ವಹಿಸಿದ್ದು, ರಘುನಾಥ್ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.
ಶಂಕರಮಠದ ಧರ್ಮಾಧಿಕಾರಿ ಜೆ.ಎನ್.ರಾಮಕೃಷ್ಣ ನಿರೂಪಿಸಿ, ರಘುನಾಥ್ ಅವರ ಸೇವಾ ಮನೋಭಾವದ ಪರಿಚಯ ಮಾಡಿಕೊಟ್ಟರು.
ಸಭೆಯಲ್ಲಿ ಪತ್ರಕರ್ತ ಪಾ.ಶ್ರೀ.ಅನಂತರಾಮ್,ಪ್ರಾಧ್ಯಾಪಕ ಮುರಳೀಧರ್ ಮತ್ತಿತರರು ಸಂಘದ ಸದೃಢತೆಗೆ ಹಲವು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬ್ರಾಹ್ಮಣ ಅಭಿವೃದ್ದಿ ಮಂಡಳಿ ನಿರ್ದೇಶಕಿ ವತ್ಸಲಾನಾಗೇಶ್, ಶುಕ್ಲ ಯಾಜ್ಞವಲ್ಕ್ಯಮಹಾಮಂಡಳಿ ಅಧ್ಯಕ್ಷ ಹಾಗೂ ಖ್ಯಾತ ವಕೀಲ ಸುಧಾಕರಬಾಬು, ಬಡಗನಾಡು ಸಂಘದ ಮುರಳಿಮೋಹನ್,ಮಾಜಿ ಶಾಸಕ ಕೆ.ಆರ್.ಶ್ರೀನಿವಾಸಯ್ಯ, ಸಮುದಾಯದ ಮುಖಂಡರಾದ ಕೆ.ವಿ.ನಾಗರಾಜ್, ಎಂ.ವಿ.ಜಯರಾಂ, ಜೆ.ಎಸ್.ಪಾರ್ಥಸಾರಥಿ,ಕಣ್ವ ಮಹಾಮಂಡಳಿ,ಬಂಗಾರಪೇಟೆ ಬ್ರಾಹ್ಮಣ ಸಂಘದ ಪದಾಧಿಕಾರಿಗಳು, ಕೋಲಾರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು, ನಿವೃತ್ತ ಉಪನ್ಯಾಸಕಿ ಕೆ.ಆರ್.ಜಯಶ್ರೀ ಸ್ವಾಗತಿಸಿ, ಆನಂದ್ ವಂದಿಸಿದರು.