ಅಖಿಲ ಕರ್ನಾಟಕ ಕವಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹೊನ್ಕಲ್ ಆಯ್ಕೆ

ಕಲಬುರಗಿ,ಸೆ.20-ಕಲ್ಯಾಣ ಕರ್ನಾಟಕದ ಮೂಲಕ ಗಿರಿನಾಡ ಜಿಲ್ಲೆಗೆ ಒಲಿದ 10ನೇ ಅಖಿಲ ಕರ್ನಾಟಕ ಕವಿ ಸಮ್ಮೇಳನ ಹಾಗೂ 65 ನೇ ಸಾಂಸ್ಕøತಿಕ ಪ್ರತಿಭೋತ್ಸವ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಸಗರನಾಡಿನ ಹೆಸರಾಂತ ಲೇಖಕ ಸಿದ್ಧರಾಮ ಹೊನ್ಕಲ್ ಅವರನ್ನು ಆಯ್ಕೆ ಮಾಡಿದೆ ಎಂದು ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷÀ, ಪತ್ರಕರ್ತ ಹಾಗೂ ಚಲನಚಿತ್ರ ನಿರ್ದೇಶಕರು ಆದ ರಮೇಶ ಸುರ್ವೆ ತಿಳಿಸಿದ್ದಾರೆ.
ಅಕ್ಟೋಬರ್ 8 ರಂದು ರವಿವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಈ ಸಮ್ಮೇಳನ ಅನೇಕ ಪ್ರಮುಖ ಲೇಖಕರು ಹಾಗೂ ರಾಜಕೀಯ ನಾಯಕರ ಮೂಲಕ ಉದ್ಘಾಟನೆಗೊಳ್ಳಲಿದೆ. ಬಹುಮುಖ್ಯವಾಗಿ ಪುನಿತ್ ರಾಜಕುಮಾರ್ ಅವರ ಬಗೆಗಿನ ವಿಶೇಷ ಕವಿಗೋಷ್ಠಿಯು ಸಹ ನಡೆಯಲಿದೆ. ರಾತ್ರಿ ಒಂಬತ್ತು ಗಂಟೆಯ ಸಮಾರೋಪದ ಸಮಾರಂಭದವರೆಗೆ ವಿವಿಧ ಗೋಷ್ಠಿಗಳು, ಗೌರವ ಪ್ರಶಸ್ತಿ ಪ್ರದಾನ ಇತ್ಯಾದಿ ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ನಾಡಿನ ಹೆಸರಾಂತ ಲೇಖಕರಾದ ಹರಿಹರಪ್ರಿಯ, ಬಿ.ಟಿ.ಲಲಿತಾ ನಾಯಕ್, ಪದ್ಮಶ್ರೀ ಡಾ.ದೊಡ್ಡ ರಂಗೆಗೌಡ, ಡಾ.ಪಂಚಾಕ್ಷರಿ ಹಿರೇಮಠg, ಡಾ.ಎಂ.ಕಿರಣಕುಮಾರ, ಚಿಂತಕ ಎಲ್.ಎನ್.ಮುಕುಂದರಾಜ್, ಡಾ.ಎಂ.ಜಿ.ಆರ್ ಅರಸು, ನಾಡೋಜ ಬಿ.ವಿ.ಸತ್ಯ ನಾರಾಯಣರಾವ, ಹಾಗೂ ಅಪ್ಪಾಸಾಹೇಬ ಅಲಿಬಾದಿ ಅವರು ಹೀಗೆ ಒಂಬತ್ತು ಮಹನೀಯರು, ಸಾಹಿತ್ಯ ಲೋಕದ ದಿಗ್ಗಜರು ಸರ್ವಾಧ್ಯಕ್ಷತೆ ವಹಿಸಿದ್ದಾರೆ. ಈಗ ಈ ಗೌರವಕ್ಕೆ ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಲ್ಯಾಣ ಕರ್ನಾಟಕದ ಹಿರಿಯ ಕವಿ ಸಿದ್ಧರಾಮ ಹೊನ್ಕಲ್ ಅವರನ್ನು ಆಯ್ಕೆ ಮಾಡಿಲಾಗಿದೆ.
ಹೊನ್ಕಲ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಕವಿಗೋಷ್ಠಿ ಹಾಗೂ ಕನ್ನಡ ಸಾಹಿತ್ಯ ಲೋಕಕ್ಕೆ ಕಾವ್ಯ ಪರಂಪರೆ ಕುರಿತು ವಿಚಾರ ಸಂಕಿರಣ ಹಮ್ಮಿಕೊಂಡಿದೆ. ಸಿದ್ಧರಾಮ ಹೊನ್ಕಲ್ ಅÀವÀರು ಶಿಕ್ಷಣ ಕ್ಷೇತ್ರದಲ್ಲಿ ಸಮಾಜ ಶಾಸ್ತ್ರ ಭೋದಕರಾಗಿ ಸೇವೆ ಸಲ್ಲಿಸಿದ್ದಾರೆ.
ವೈವಿದ್ಯಮಯ ಸುಮಾರು 50 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ ಕವನ, ಹನಿಗವನ, ಗಜಲ್, ಹೈಕುಗಳು ಮತ್ತು ಶಾಯರಿಗಳೂ ಸೇರಿವೆ. ಅವೆಲ್ಲ ಸೇರಿ 12 ಕಾವ್ಯ ಸಂಕಲನ, ಕಥಾ ಸಂಕಲನ 5, ಲಲಿತ ಪ್ರಬಂಧ-5 ಪ್ರವಾಸ ಕಥನಗಳು-6 ಮತ್ತು ಇತರೆ ಕೃತಿಗಳು ಹಾಗೂ ಸಂಪಾದನೆಗಳು ಸೇರಿ 22 ಕ್ಕೂ ಹೆಚ್ಚು ಗ್ರಂಥಗಳನ್ನು ಸಂಪಾದಿಸಿದ್ದಾರೆ.
ತಮ್ಮ ಸಾಹಿತ್ಯ ಕೃತಿಗಳಿಗೆ ಕಲಬುರ್ಗಿ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಚಿನ್ನದ ಪದಕ ಹಾಗೂ ಅನೇಕ ಸಂಘ-ಸಂಸ್ಥೆಗಳಿಂದ ಅತ್ತಿಮಬ್ಬೆ ಪ್ರಶಸ್ತಿ ಮತ್ತು ಶ್ರೀವಿಜಯ ಪ್ರಶಸ್ತಿಗಳ ಜೊತೆಗೆ ನಲವತ್ತುಕ್ಕೂ ಹೆಚ್ಚು ಬಹು ಮುಖ್ಯ ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಇವರ ಅನೇಕ ಕಥೆ, ಲಲಿತ ಪ್ರಬಂಧ, ಪ್ರವಾಸ ಕಥನ ಕೃತಿಗಳು ಕರ್ನಾಟಕದ ಹಾಗೂ ಹೊರನಾಡ ವಿವಿಗಳಲ್ಲಿ ಸಹ ಪಠ್ಯವಾಗಿರುವುದು ವಿಶೇಷವಾಗಿದೆ.
ಇವರ ಒಟ್ಟಾರೆ ಸಾಹಿತ್ಯದ ಮೇಲೆ ಒಬ್ಬರು ಡಾಕ್ಟರೇಟ್ ಪಡೆದಿದ್ದಾರೆ. ಕಥೆಗಳ ಮೇಲೆ ಒಬ್ಬರು ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ. ಯಾದಗಿರಿ ಜಿಲ್ಲೆಯ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ, ಶಹಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಸ್ಥಾನವನ್ನು ಅಲಂಕರಿಸಿದ್ದು ವಿಶೇಷವಾಗಿದೆ.
ಅ.8 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಯಲ್ಲಿ, ನಾಡಿನ ವಿವಿಧ ಕಲಾವಿದರಿಂದ ಚಿತ್ರಕಲೆ, ವ್ಯಂಗ್ಯ ಚಿತ್ರ ಹಾಗೂ ಪುಸ್ತಕ,ಛಾಯಾಚಿತ್ರ ಪ್ರದರ್ಶನದ ಜೊತೆಗೆ, 65ನೇ ಸಾಂಸ್ಕೃತಿಕ ಪ್ರತಿಭೋತ್ಸವದ ಅಂಗವಾಗಿ, ನಾಡಿನ ಅನೇಕ ಕಲಾವಿದರಿಂದ ಸಾಂಸ್ಕೃತಿಕ ಪ್ರದರ್ಶನ ಜರುಗುತ್ತಿವೆ. ಮದ್ಯಾಹ್ನ 2 ರಿಂದ 5 ಗಂಟೆಯವರೆಗೆ ‘ಪುನೀತ್ ರಾಜಕುಮಾರ್’ ಹೆಸರಿನಲ್ಲಿ ವಿಶೇಷ ಕವಿಗೋಷ್ಠಿಯೊಂದು ಜರುಗಲಿದೆ. ಕವಿಗಳಿಗಾಗಿ ಒಂದು ದಿನದ ಕಾರ್ಯಾಗಾರವನ್ನೂ ಹಮ್ಮಿಕೊಂಡಿರುವುದಲ್ಲದೆ. ‘ಕವಿಗಳ ಕಣ್ಣಲ್ಲಿ ಪುನೀತ್ ರಾಜಕುಮಾರ್’ ಕವಿಗೋಷ್ಠಿಯು ಹಾಗೂ ಕವನ ರಚನಾ ಸ್ಪರ್ಧೆ ನಡೆಯಲಿದೆ.
ಆಯ್ಕೆಯಾದ ಬೇರೆ ಬೇರೆ ಜಿಲ್ಲೆಯ ಕವಿಗಳು ಕವನ ವಾಚಿಸಲಿದ್ದಾರೆ. ಭಾಗವಹಿಸಲು ಸಾಧ್ಯವಾಗದವರು, ‘ಪುನೀತ್ ರಾಜಕುಮಾರ್’ ಕುರಿತು 2 ಕವನ ಕಳುಹಿಸಿದರೆ, ಪ್ರಕಟವಾಗಲಿರುವ ಕವನ ಸಂಕಲನದಲ್ಲಿ ಸೇರಿಸಲಾಗುತ್ತದೆ.
ಸಂಜೆ ವಿಚಾರ ಸಂಕಿರಣ ಹಾಗೂ ವಿಶೇಷ ಸಾಧಕರಿಗೆ ಪ್ರತಿಷ್ಠಾನದ ವಿವಿಧ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ, ಹಾಗೂ ಸಮಾರಂಭದಲ್ಲಿ ಗೌರವ ಅಧ್ಯಕ್ಷ ಪ್ರಭುಸ್ವಾಮಿ ಸರಗಣಾಚಾರಿ ಉಪಸ್ಥಿತರಿರುತ್ತಾರೆಂದು ಪ್ರತಿಷ್ಠಾನದ ಅಧ್ಯಕ್ಷರಾದ ರಮೇಶ ಸುರ್ವೆ ತಿಳಿಸಿದ್ದಾರೆ.