ಅಖಿಲಭಾರತ ಶರಣ ಸಾಹಿತ್ಯಪರಿಷತ್ ಸಂಸ್ಥಾಪಕ ಮಹನೀಯ,  ಸುತ್ತೂರುಮಠದಜಗದ್ಗುರು ಶಿವರಾತ್ರಿರಾಜೇಂದ್ರ ಮಹಾಸ್ವಾಮಿಗಳು 

 

ವಚನ ಸಾಹಿತ್ಯ ಕೇವಲ ವಿಚಾರಗೋಷ್ಠಿಗಳ ವಸ್ತುವಲ್ಲ, ವ್ಯಕ್ತಿಯ ಅಂತರಂಗ ಹಾಗೂ ಬಹಿರಂಗ ಶುದ್ದಿಯ ಒಂದು ಶಿಸ್ತು. ಅದು ಕೇವಲ ವಾಜ್ಮಯವಲ್ಲ, ವ್ಯಕ್ತಿಯ ಅಜ್ಞಾನವನ್ನು ಕಳೆಯುವ ಅಭಿಜ್ಞಾನ .ವ್ಯಕ್ತಿಯಲ್ಲಿ ಜೀವನ ವಿಶ್ವಾಸವನ್ನು ತುಂಬುವ ಜೋಪಾಸನ. ವ್ಯಕ್ತಿಯ ಅವಗುಣಗಳನ್ನು ಕಳೆದು ಶಿವ ಗುಣಗಳನ್ನು  ಮೈಗೂಡಿಸುವ ದಿವ್ಯ ಜ್ಞಾನ. ವಚನ ಸಾಹಿತ್ಯದ ವಾಸ್ತವಿಕ ಮತ್ತು ವೈಚಾರಿಕ ಚಿಂತನೆಗಳನ್ನು ಈ ಸಮಾಜಕ್ಕೆ ನಿರಂತರ ತಲುಪಿಸುವ ಉದ್ದೇಶದಿಂದ ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು1981ರ ಆಗಸ್ಟ್ 29 ರಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಕಾಕತಾಳಿಯ ಎನ್ನುವಂತೆ ಆಗಸ್ಟ್ 29 ಪೂಜ್ಯರ ಜನ್ಮದಿನವೂ ಹೌದು.  ಹಾಗಾಗಿ ಶರಣ ಸಾಹಿತ್ಯ ಪ್ರಿಯರಿಗೆ ಈ ದಿನ ಮಹತ್ತರ ದಿನ .ಸಂಕಲ್ಪ ಶಕ್ತಿಯನ್ನು ಉದ್ದೀಪನ ಗೊಳಿಸುವ ಸಂಸ್ಥಾಪಕರ ದಿನವಾಗಿ ಎಲ್ಲೆಡೆ ರಾಜಾಜಿಸುತ್ತಿದೆ.ಪೂಜ್ಯ  ಜಗದ್ಗುರುಗಳ ಸಮಗ್ರ ಜೀವನವನ್ನು ತಿಳಿಯ ಬೇಕೆಂದರೆ ಹಿರಿಯ ಸಂಶೋಧಕರಾದ ಲಿಂ. ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರ ಕಾಯಕ ತಪಸ್ವಿ ಮತ್ತು ಪ್ರಸಿದ್ಧ ಲೇಖಕರಾದ ಶ್ರೀ ವೀರಭದ್ರರು ರಚಿಸಿರುವ   ಸುತ್ತೂರು ಸುರಧೇನು ಎಂಬ ಚಾರಿತ್ರಿಕ ಗ್ರಂಥಗಳನ್ನು ಓದಬೇಕು. ಅವರ ಭವಿಷ್ಯದ ಬೆಳವಣಿಯ ಸುಳಿಗಳೆಲ್ಲ ಬಾಲ್ಯದಲ್ಲಿ ಚಿಗುರೊಡೆದು  ನಿಂತಿರುವುದನ್ನು ನಾವು ಕಾಣಬಹುದು.5 ವರ್ಷದ  ಬಾಲಕನಿದ್ದಾಗಲೆ ಸುತ್ತೂರು ಮಠಕ್ಕೆ ಸಮರ್ಪಿತವಾದ  ಮಹನೀಯರು  ಕಾಶಿಯಲ್ಲಿ ಉನ್ನತ ಶಿಕ್ಷಣ ಪಡೆದು ಆಧ್ಯಾತ್ಮ ಜ್ಞಾನದ ಮೇರು ಶಿಖರವೇ ಆದರು.ಧಾರ್ಮಿಕ ಇತಿಹಾಸದಲ್ಲಿ ಸುಮಾರು ಒಂದೂವರೆ ಸಾವಿರ ವರ್ಷಗಳಷ್ಟು ಸುಧೀರ್ಘ ಪರಂಪರೆಯನ್ನು ಪಡೆದಿರುವ ಸುತ್ತೂರು ವೀರ ಸಿಂಹಾಸನ ಮಠವು ಪರಮ ತೇಜೋ ಮೂರ್ತಿ ಆದಿ ಶಿವರಾತ್ರಿಶ್ವರ ಭಗವತ್ಪಾದರಿಂದ ಮೊದಲ್ಗೊಂಡು ಒಟ್ಟು  24 ಜಗದ್ಗುರುಗಳನ್ನು ಕಂಡಿದೆ. 23ನೇ ಜಗದ್ಗುರುಗಳಾಗಿದ್ದ ಪೂಜ್ಯ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳುಸುತ್ತೂರು ಕ್ಷೇತ್ರವನ್ನು  ಧರ್ಮಸಮನ್ವಯ, ಕಾಯಕ-  ದಾಸೋಹ ಸೇವೆ ಮತ್ತು ಶಿಕ್ಷಣ ಪ್ರಸಾರ ಈ ಮೂರು ಮಹತ್ತುಗಳ ಮಹಾಮನೆಯನ್ನಾಗಿಸಿ   ನಾಡಿನ  ತುಂಬೆಲ್ಲ ಬೆಳಕಾದವರು. ಶ್ರೀ ಕ್ಷೇತ್ರಕ್ಕೆ ವಿಸ್ತಾರದ ವಸ್ತ್ರ ಧರಿಸಿದವರು ಪ್ರಸ್ತುತ ಪೂಜ್ಯ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು ಪೂಜ್ಯ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಮೊದಲು ಕೈಗೊಂಡ ಸೇವೆ ಎಂದರೆ ವಿದ್ಯಾರ್ಥಿ ನಿಲಯಸ್ಥಾಪನೆ .ಅಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದದ ವ್ಯವಸ್ಥೆ .ಗ್ರಾಮಾಂತರ ಪ್ರದೇಶದ ಮಕ್ಕಳ ಸಂಖ್ಯೆ ಅಧಿಕವಾಗಿ ವಿದ್ಯಾರ್ಥಿ ನಿಲಯದ ಪ್ರಸಾದ ವ್ಯವಸ್ಥೆಗೆ ಸಾಲ ಮಾಡ ಬೇಕಾಗುತ್ತದೆ. ಒಂದು ಸಲ ಪರಿಸ್ಥಿತಿ ತುಂಬಾ ಗಂಭೀರವಾಗಿ ಪೂಜ್ಯರು ತಮ್ಮ ಕೊರಳಲ್ಲಿದ್ದ ಬಂಗಾರದ ಕರಡಿಗೆಯನ್ನೇ ಮಾರಿ ಮಕ್ಕಳಿಗೆ ಪ್ರಸಾದ ವ್ಯವಸ್ಥೆ ಮಾಡುತ್ತಾರೆ. ಕೆಲವರು ಇವರ ಕಷ್ಟ ನೋಡಿ “ಸ್ವಾಮೀಜಿ, ನೀವು ಹೀಗೆ ಸಾಲ ಮಾಡುತ್ತಾ ಹೋದರೆ ಹೇಗೆ? ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆ ಮಾಡಿಬಿಡಿ “ಎಂದಾಗ ಸ್ವಾಮಿಗಳು ಸಾಲ ಕೊಡಿಸಿದ ಗುರುವಿಗೆ ಅದನ್ನು ತೀರಿಸುವ ಕ್ರಮವೂ ತಿಳಿದಿರುತ್ತದೆ ಈ ಹಳ್ಳಿಯ ಬಡಮಕ್ಕಳ ಗತಿಯೇನು?ಇಲ್ಲಿ ಬೆಳಗಿದ ದೀಪ ಮತ್ತೊಂದು ದೀಪವನ್ನು ಬೆಳಗುವುದೆಂಬ ವಿಶ್ವಾಸ ನಮಗಿದೆ ಎಂದು ನುಡಿದರಂತೆ.ಶ್ರೀ ಮಠಕ್ಕೆ ಮೈಸೂರು ಮಹಾರಾಜರ ಸಂಪರ್ಕ ಬೆಳೆದದ್ದು ವಿದ್ಯಾರ್ಥಿ ನಿಲಯ ಮತ್ತು ಶಿಕ್ಷಣ ಸಂಸ್ಥೆಗಳ ಸೇವೆಯನ್ನು ವಿಸ್ತರಿಸಲು ಒಂದಷ್ಟು ಅವಕಾಶವಾಯಿತು. ಮಹಾರಾಜರು ಪೂಜ್ಯರ ಸೇವೆಯನ್ನು ಗುರುತಿಸಿ ಪೂಜ್ಯರಿಗೆ ರಾಜಗುರು ತಿಲಕ ಎಂಬಬಿರುದನ್ನು ನೀಡಿ ಗೌರವಿಸಿದರು . ನಂತರ ಮೈಸೂರು ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು.ಪೂಜ್ಯ ರಾಜೇಂದ್ರ ಜಗದ್ಗುರುಗಳ ಬಹುದೊಡ್ಡ ಸಾಧನೆಯೆಂದರೆ ಜೆಎಸ್ಎಸ್ ಮಹಾವಿದ್ಯಾಪೀಠವನ್ನು ಸ್ಥಾಪಿಸಿದ್ದು . ಅದೀಗ ಜಾಗತಿಕವಾಗಿ ಪ್ರಸಿದ್ಧಿ ಪಡೆದಿದೆ. ಇದರ ಆಶ್ರಯದಲ್ಲಿ ಪೂರ್ವ ಪ್ರಾಥಮಿಕ ದಿಂದ ಸ್ನಾತಕೋತ್ತರ ಹಂತದವರೆಗೆ ಸಾಮಾನ್ಯ ಶಿಕ್ಷಣವು ಸೇರಿದಂತೆ ತಾಂತ್ರಿಕ, ವೈದ್ಯಕೀಯ ಮಹಾವಿದ್ಯಾಲಯಗಳು, ಶಿಕ್ಷಣ ತರಬೇತಿ ಸಂಸ್ಥೆಗಳು ,ವಿದ್ಯಾರ್ಥಿ ನಿಲಯಗಳು, ಆಸ್ಪತ್ರೆಗಳು, ಸಾಂಸ್ಕೃತಿಕ ಸಂಘಟನೆಗಳು, ಸಹಕಾರ ಸಂಘಗಳು, ಕೃಷಿ, ಗ್ರಾಮೀಣ ಅಭಿವೃದ್ಧಿ ,ಆಯುರ್ವೇದ, ನಿಸರ್ಗ ಚಿಕಿತ್ಸಾ ಕೇಂದ್ರಗಳು ,ಸಾಹಿತ್ಯ ಪ್ರಕಾಶನ ಹೀಗೆ 35೦ ಕ್ಕೂ ಹೆಚ್ಚು ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.ಪೂಜ್ಯರ ಒಂದು ಮಹತ್ಕಾರ್ಯ ವೆಂದರೆ  ಪ್ರಚಲಿತ ವಿದ್ಯಮಾನಗಳನ್ನು ಗಮನಿಸಿ , ಜನರಲ್ಲಿ ನೈತಿಕ ಪ್ರಜ್ಞೆಯನ್ನು ಉಂಟುಮಾಡುವ ಸಲುವಾಗಿ ಬಸವಾದಿ ಶರಣರ ಆದರ್ಶಗಳನ್ನು ಇಂದಿನ ಮತ್ತು ಮುಂದಿನ ತಲೆಮಾರಿಗೆ ತಿಳಿಸುವಂತಹ ಒಂದು ವ್ಯವಸ್ಥೆ ಇರಬೇಕೆಂದು ವಿಚಾರ ಮಾಡಿ 1981 ರಲ್ಲಿ ಅಖಿಲ ಭಾರತ ಶರಣ ಪರಿಷತ್ತು   ಸ್ಥಾಪಿಸಿದ್ದು.ಪರಿಷತ್ತು  ವಾಸ್ತವವಾಗಿ ಕಾರ್ಯ ಆರಂಭ ಮಾಡಿದ್ದು 1986ರಲ್ಲಿ .ನಾಡಿನ ಹಿರಿಯ ವಿದ್ವಾಂಸರಾದ ಡಾ. ಎಚ್ ತಿಪ್ಪೇರುದ್ರ ಸ್ವಾಮಿಗಳನ್ನು ಪೂಜ್ಯರು ಅಧ್ಯಕ್ಷರನ್ನಾಗಿ ನೇಮಿಸಿದರು. ತನ್ಮೂಲಕ ಶರಣ ಸಾಹಿತ್ಯ, ಸಂಸ್ಕೃತಿ, ಸಂರಕ್ಷಣೆ ,ಸಂಶೋಧನೆ ,ಪ್ರಕಟಣೆ, ಪ್ರಸಾದ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಇಂದು ಶರಣ ಸಾಹಿತ್ಯ ಪರಿಷತ್ತು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಘಟಕಗಳನ್ನು ಹೊಂದಿರುವುದಲ್ಲದೆ ಭಾರತದ ಎಲ್ಲ ರಾಜ್ಯಗಳಲ್ಲಿಯೂ ತನ್ನ ಶಾಖೆಗಳನ್ನು ಹೊಂದಿದೆ . ಗೊರೂಚ ರಂತಹ ಜಾನಪದ ವಿದ್ವಾಂಸರು, ಶರಣ ಚಿಂತಕರಾದ  ಶ್ರಿ ಮಲೆಯೂರು ಗುರುಸ್ವಾಮಿ ಮುಂತಾದ ಮಹನೀಯರು  ಪರಿಷತ್ತನ್ನು ಘನತರವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ .ಈಗ ಶರಣ ಅಪ್ಪರಾವ್ ಅಕ್ಕೋಣೆ ಯವರು ಅಧ್ಯಕ್ಷರಾಗಿದ್ದಾರೆ.ಲಿಂ.ಡಾ.  ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಬಸವಣ್ಣನ ಭಕ್ತಿಗೆ ಬೆರಗಾದವರು, ಅಕ್ಕಮಹಾದೇವಿಯ ವೈರಾಗ್ಯಕ್ಕೆ ಮಂತ್ರ ಮುಗ್ಧರಾದವರು, ಅಲ್ಲಮಪ್ರಭುವಿನ ಆತ್ಮ ಜ್ಞಾನಕ್ಕೆ ಶರಣಾದವರು ,ಹಾಗೆಯೇ ಸಮಾಜದ ದುಸ್ಥಿತಿಗೆ ಮುಮ್ಮಲ ಮರುಗಿದವರು. .ಸಮುದಾಯ ಜಾಗೃತಿಗೆ ದನಿ ನೀಡಿದವರು, ಕಲ್ಲಾಗಿದ್ದವರನ್ನು ಕಟೆದು ಮೂರ್ತಿ ಮಾಡಿದವರು, ಬೀಜವಾಗಿದ್ದನ್ನು ಬಿತ್ತಿ ಬೆಳೆದವರು. ಕಸವಾಗಿದ್ದನ್ನು ರಸವನ್ನಾಗಿ ಪರಿವರ್ತಿಸಿದವರು .”ಇದು ಶರಣ ಮಹನೀಯ ಗೊರುಚ ರವರು ಪೂಜ್ಯರನ್ನು ಚಿತ್ರಿಸಿರುವ ಚಿತ್ತಾಕರ್ಷಕ ಪರಿ !ಈ ಕಾರಣದಿಂದಲೇ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳನ್ನು ನಾವು ಮತ್ತೆ ಮತ್ತೆ ಸ್ಮರಿಸಬೇಕಿದೆ.

 ಎನ್ .ಟಿ ಎರ್ರಿಸ್ವಾಮಿ

 ನಿವೃತ್ತ ಕೆನರಾಬ್ಯಾಂಕ್ ಡಿ.ಎಂ ಜಗಳೂರು  9901909672

.