ಅಖಂಡ ಸೃಷ್ಟಿಗೆ ಕಾರಣೀಭೂತವಾದ ಚೈತನ್ಯವೇ ಶಿವ

ಕಲಬುರಗಿ:ಆ.20: ಪುರಾಣಗಳಲ್ಲಿ ಶಿವನನ್ನು ಒಬ್ಬ ವ್ಯಕ್ತಿಯನ್ನಾಗಿ ಬಿಂಬಿಸಲಾಗಿದೆ. ಆದರೆ ಶಿವಶರಣರು ತಮ್ಮ ವಚನಗಳಲ್ಲಿ ಶಿವ ಎಂಬುದೊಂದು ತತ್ವ. ಅದೊಂದು ಚೈತನ್ಯ ತತ್ವ. ಆ ತತ್ವವನ್ನು ಅರಿತು ಅದರಲ್ಲಿ ಬೆರೆತ ಗಣೇಶ್ವರನನ್ನು ಶಿವ ಎಂದು ಕರೆದಿದ್ದಾರೆ ಎಂದು ಪತ್ರಕರ್ತ- ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.

ಶ್ರಾವಣ ಮಾಸದ ಅಂಗವಾಗಿ ಇಲ್ಲಿನ ಜಯನಗರದ ಶಿವ ಮಂದಿರ ಅಭಿವೃದ್ಧಿ ಟ್ರಸ್ಟ್ ಅಡಿಯಲ್ಲಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ‘ಶರಣರ ದೃಷ್ಟಿಯಲ್ಲಿ ಶಿವ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಶಿವ ಎಂದರೆ ಅಖಂಡ ಸೃಷ್ಟಿಗೆ ಕಾರಣೀಭೂತವಾದ ಚೈತನ್ಯ. ಅದೇ ಚೈತನ್ಯದಲ್ಲಿ ಇಡೀ ಸೃಷ್ಟಿ ಪುನಃ ಅಡಗುವುದು. ಶಿವನ ಈ ಕ್ರಿಯೆ ಮಾನವ ಸೀಮಿತ ಅರಿವಿಗೆ ನಿಲುಕುವುವಿದಿಲ್ಲ ಎಂದು ಶರಣರು ತಿಳಿಸಿದ್ದಾರೆ ಎಂದರು.

ರುದ್ರ, ಭದ್ರ, ಶಂಕರ, ಶಶಿಧರ ಇವರೆಲ್ಲರೂ ನಮ್ಮ ಗುಹೇಶ್ವರಲಿಂಗದೊಳಗಡಗಿಪ್ಪರು ಎಂದು ಹೇಳುವ ಅಲ್ಲಮಪ್ರಭುಗಳು ಅಜಾತನ ಚರಿತ್ರ ಪವಿತ್ರವಾಗಿದೆ ಎಂದಿದ್ದಾರೆ. ಆದಿ ಅನಾದಿಗಳೆಂಬೆರಡಿಲ್ಲದ ನಿರವಯ, ವೇದ, ಶಾಸ್ತ್ರ, ಪುರಾಣಗಳಿಗೆ ಅಭೇದ್ಯ, ಅಸಾಧ್ಯ, ಅಗಮ್ಯ ಎಂದು ಅಕ್ಕಮಹಾದೇವಿ ಶಿವ ಸ್ವರೂಪವನ್ನು ಕೊಂಡಾಡಿದ್ದಾರೆ ಎಂದು ತಿಳಿಸಿದರು.

ಶರಣರ ದೃಷ್ಟಿಯಲ್ಲಿ ಶಿವತತ್ವಕ್ಕೆ ಹುಟ್ಟು ಇಲ್ಲ. ಸಾವು ಇಲ್ಲ. ಸತಿ, ಸುತರೂ ಇಲ್ಲ. ತಾನು ಹುಟ್ಟದೆ, ಹೊಂದದೆ ಪ್ರಪಂಚದ ಹುಟ್ಟು, ಹೊಂದುವಿಕೆಗೆ ಕಾರಣವಾದ ಚೈತನ್ಯವೇ ಪರಶಿವ ತತ್ವ ಎಂದು ಹೇಳಿದ್ದಾರೆ ಎಂದು ಶರಣರ ವಚನಗಳನ್ನು ಉಲ್ಲೇಖಿಸಿದರು.

ಇದೇವೇಳೆಯಲ್ಲಿ ಶಿವ ಧರ್ಮ ಕುರಿತು ಶಿವಶಂಕರ ಬಿರಾದಾರ ಅವರು ಶಿವ ಧರ್ಮ ಕುರಿತು ಪ್ರವಚನ ನೀಡಿದರು. ಶಿವ ಮಂದಿರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಾಗಾಪುರ ಅಧ್ಯಕ್ಷತೆ ವಹಿಸಿದ್ದರು. ಸೂರ್ಯಕಾಂತ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಟ್ರಸ್ಟ್ ನ ವಿರೇಶ ಎಸ್. ದಂಡೋತಿ, ಬಂಡಪ್ಪ ಕೇಸೂರ, ಶಿವಪುತ್ರಪ್ಪ ಮರಡಿ ಸೇರಿದಂತೆ ಬಡಾವಣೆಯ ನಿವಾಸಿಗಳು ಭಾಗವಹಿಸಿದ್ದರು.


ಸುಮಾರು 149ಕ್ಕೂ ಹೆಚ್ಚು ವಚನಕಾರರು ತಮ್ಮ 4391 ವಚನಗಳಲ್ಲಿ 8558 ಬಾರಿ ಶಿವ ಪದವನ್ನು ಬಳಸಿದ್ದಾರೆ. ಪುರಾಣಗಳಲ್ಲಿ ಉಲ್ಲೇಖವಾಗಿರುವ ಶಿವ ಪದ ಹಾಗೂ ವಚನಗಳಲ್ಲಿ ಶಿವ ಪದ ಬಳಕೆಯ ಬಗ್ಗೆ ಅರಿತು ನಡೆದರೆ ಜೀವನ ಪಾವನವಾಗುವುದು.
-ಡಾ. ಶಿವರಂಜನ ಸತ್ಯಂಪೇಟೆ, ಕಲಬುರಗಿ