(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.25: ಇಂದು ಪ್ರಕಟಗೊಂಡ ವಿಧಾನ ಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಮೊಲ ಪಟ್ಟಿಯಲ್ಲಿ ನಿರೀಕ್ಷೆಯಂತೆ ಅಖಂಡ ಜಿಲ್ಲೆಯ ಹತ್ತು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿದ್ದ ಹಾಲಿ ಶಾಸಕರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಘೋಷಣೆ ಮಾಡಿದೆ ಜೊತೆಗೆ ವಿಜಯನಗರ ಜಿಲ್ಲೆಗೂ ಟಿಕೆಟ್ ಘೋಷಣೆ ಮಾಡಿದೆ.
ಅವರಿಗೆ, ಇವರಿಗೆ ಟಿಕೆಟ್ ಎನ್ನುತ್ತಿದ್ದ ವಿಷಯಕ್ಕೆ ವಿಜಯನಗರ ಕ್ಷೇತ್ರದಲ್ಲಿ ಮಾಜಿ ಶಾಸಕ ಹೆಚ್.ಆರ್.ಗವಿಯಪ್ಪ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಸಹಜವಾಗಿ ಹಾಲಿ ಶಾಸಕ ಸಿಂಗ್ ಅವರಿಗೆ ಪ್ರಬಲ ಪೈಪೋಟಿಯನ್ನು ನೀಡುವ ನಿರೀಕ್ಷೆ ಇದೆ.
ಇನ್ನು ಹಲವು ವಿರೋಧಿಗಳ ನಡುವೆ ಹಡಗಲಿಯಿಂದ ಪಿ.ಟಿ.ಪರಮೇಶ್ವರ ನಾಯ್ಕ, ಹಗರಿಬೊಮ್ಮನಹಳ್ಳಿಯಿಂದ ಭೀಮಾನಾಯ್ಕ, ಕಂಪ್ಲಿಯಿಂದ ಗಣೇಶ್ ಗೆ ಟಿಕೆಟ್ ಘೋಷಣೆಯಾಗಿದೆ. ಸಂಡೂರಿನಿಂದ ಈ ತುಕರಾಂ ಮತ್ತು ಬಳ್ಳಾರಿ ಗ್ರಾಮೀಣದಿಂದ ಯಾವ ವಿರೋಧ ಇಲ್ಲದೆ ನಾಗೇಂದ್ರರಿಗೆ ಟಿಕೆಟ್ ನೀಡಿದೆ.
ನಾಗೇಂದ್ರ, ತುಕರಾಂ, ನಾಲ್ಕನೇ ಬಾರಿಗೆ ಶಾಸಕರಾಗಲು, ಪರಮೇಶ್ವರ ನಾಯ್ಕ ಐದನೇ ಬಾರಿಗೆ ಶಾಸಕರಾಗಲು, ಭೀಮಾನಾಯ್ಕ ಮೂರನೇ ಬಾರಿಗೆ ಶಾಸಕರಾಗಲು, ಗಣೇಶ್ ಮತ್ತು ಗವಿಯಪ್ಪ ಎರಡನೇ ಬಾರಿಗೆ ಶಾಸಕರಾಗಲು ಬಯಸಿದ್ದಾರೆ.
ಇನ್ನು ತೀವ್ರ ಪೈಪೋಟಿ ಇರುವ ಬಳ್ಳಾರಿ ನಗರ, ಹರಪನಹಳ್ಳಿ, ಕೂಡ್ಲಿಗಿ ಮತ್ತು ಸಿರುಗುಪ್ಪ ಕ್ಷೇತ್ರದ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಆಗಬೇಕಿದೆ.
ಬಲ್ಲ ಮೂಲಗಳ ಪ್ರಕಾರ, ಸಿರುಗುಪ್ಪಕ್ಕೆ ಮುರುಳಿಕೃಷ್ಣ, ಬಳ್ಳಾರಿ ನಗರಕ್ಕೆ ಅಲ್ಲಂ ಪ್ರಶಾಂತ್, ಹರಪನಹಳ್ಳಿಗೆ ಎಂ.ಪಿ.ಲತಾ ಮತ್ತು ಕೂಡ್ಲಿಗಿಗೆ ಡಾ.ಶ್ರೀನಿವಾಸ್ ಅವರ ಹೆಸರು ಅಂತಿಮವಾಗಿವೆ ಎನ್ನಲಾಗುತ್ತಿದೆ. ಕೊನೆಯದಾಗಿ ಬದಲಾವಣೆ ಆಗುವ ಸಾಧ್ಯತೆಗಳು ಇವೆ.