ಅಖಂಡತ್ವ ನಮ್ಮ ಸಾಹಿತ್ಯದ ತಿರುಳಾಗಬೇಕು

ಕೋಲಾರ.ಏ.೨೦: ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ಜೊತೆಯಲ್ಲಿ ನಿರಂತರವಾಗಿ ಹಾಗೂ ಪೂರಕವಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವುದು ಚುಟುಕು ಸಾಹಿತ್ಯ ಪರಿಷತ್ತು ಎಂದು ಕೆಜಿಎಫ್ ಪ್ರಥಮ ಕಾಲೇಜಿನ ಉಪನ್ಯಾಸಕ ವೆಂಕಟೇಶಬಾಬು ಅಭಿಪ್ರಾಯ ಪಟ್ಟರು.
ಕೆಜಿಎಫ್ ನ ಪಿಚ್ಚಹಳ್ಳಿಯಲ್ಲಿ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಕವಿ ಕಾವ್ಯ ಸಂಭ್ರಮವನ್ನು ಉದ್ಘಾಟಿಸಿ ಮಾತಾನಾಡುತ್ತಿದ್ದರು.
ಇಂದಿನ ಸಾಹಿತ್ಯ ಜನಮುಖಿಯಾಗಿ ರಚನೆಯಾಗುತ್ತಿಲ್ಲ. ಅದು ಜನರಿಗೆ ತಲುಪುವುದರಲ್ಲಿ ಹಿಂದೆ ಬಿದ್ದಿದೆ ಇಂತಹ ಸಂದರ್ಭಗಳಲ್ಲಿ ಚುಟುಕು ಸಾಹಿತ್ಯ ಪರಿಷತ್ತು ನಿರಂತರವಾಗಿ ಕಳೆದ ಮೂವತ್ತು ವರ್ಷಗಳಿಂದ ಅನೇಕ ಕನ್ನಡ ಪರ ಸಾಹಿತ್ಯ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವುದು ಶ್ಲಾಘನೀಯ. ಸಾಹಿತ್ಯ ಕಲುಷಿತ ಗೊಂಡಿದೆ. ಕವಿಗಳಿಗೆ ಸಾಹಿತ್ಯದ ವೇದಿಕೆಗಳು ಸಿಗುವುದು ಅಪರೂಪವಾಗಿದೆ. ಕಡೆಗಣಿಸಲ್ಪಟ್ಟ ಅನೇಕ ಕಿರಿಯ ಹಿರಿಯ ಸಾಹಿತಿಗಳನ್ನು ಹುಡುಕಿಕೊಂಡು ಹೋಗಿ ಅವರ ಸಾಹಿತ್ಯವನ್ನು ಜನಪರಗೊಳಿಸಲು ಚುಟುಕು ಸಾಹಿತ್ಯ ಪರಿಷತ್ತು ಅವಿರತ ಪರಿಶ್ರಮ ಪಡುತ್ತಿದೆ ಎಂದರು. ಸಾಹಿತ್ಯದ ಗಂಧವೇ ಗೊತ್ತಿರದ ಈ ಯಾಂತ್ರಿಕ ಬದುಕಿಗೆ ಸಾಹಿತ್ಯದ ಚಿಕಿತ್ಸೆ ಅನಿವಾರ್ಯವಾಗಿದೆ ಎಂದರು.
ಕವಿ ಜಿ.ಟಿ ರಾಮಚಂದ್ರ ಅವರು ಮಾತಾನಾಡಿ ಸಾಹಿತ್ಯದಿಂದ ರಸಾನುಭವ ಸಿಗುತ್ತದೆ ಹಾಗಾಗಿ ಸಮಾಜದಲ್ಲಿ ಪ್ರಸ್ತುತ ವಸ್ತು ಸ್ಥಿತಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿರಬೇಕಾಗುತ್ತದೆ. ಬದುಕಿನ ಕ್ಷಣಗಳನ್ನು ಸಾಹಿತ್ಯದೊಂದಿಗೆ ಮೈಗೂಡಿಸಿಕೊಂಡಾಗ ಒಂದು ವಿಶಿಷ್ಟ ವ್ಯಕ್ತಿತ್ವ ರೂಪಗೊಳ್ಳುತ್ತದೆ ಎಂದರು.
ಕವಿ ಡಾ. ಶರಣಪ್ಪ ಗಬ್ಬೂರ್ ಮಾತಾನಾಡಿ ಅಖಂಡತ್ವ ನಮ್ಮ ಸಾಹಿತ್ಯದ ತಿರುಳಾಗಬೇಕು. ಬೌದ್ಧಿಕ ಮತ್ತು ಭೌತಿಕವಾಗಿ ಮುನ್ನಡೆಯಲು ಸಾಹಿತ್ಯ ಮನುಷ್ಯನಿಗೆ ಪೂರಕವಾಗಿರುತ್ತದೆ ಎಂದರು.
ಉಪನ್ಯಾಸಕ ಟೇಕಲ್ ಯಲ್ಲಪ್ಪ ಮಾತಾನಾಡಿ ಪ್ರಚಲಿತ ತಲ್ಲಣಗಳನ್ನು ಕುರಿತು ಸಾಹಿತ್ಯ ತಿಳಿಯಪಡಿಸಬೇಕಾಗಿದೆ. ದೇಸಿ ಜಾನಪದ ಬರವಣಿಗೆಯ ಕಡೆಗೆ ಹೆಚ್ಚು ಗಮನ ಹರಿಸಿ ವೈಚಾರಿಕ ಪ್ರಜ್ಞೆ ಮತ್ತು ಸಂವೇದನಾಶೀಲವಾದ ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಡಬೇಕೆಂದರು.
ಅಧ್ಯಕ್ಷತೆ ವಹಿಸಿದ ಕೆಜಿಎಫ್ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಕವಿ ಜಿ ಸುಧಾಕರ್ ಮಾತಾನಾಡಿ ಸಾಹಿತ್ಯ ಎನ್ನುವುದು ಬೆಂಕಿ ಹುಟ್ಟಿಸುವುದಲ್ಲ. ಬದಲಾಗಿ ಬೆಳಕು ಮೂಡಿಸುವ ಕಾಯಕ. ಜಾತಿ ಸೃಷ್ಟಿಸುವುದಲ್ಲ. ರಾಜಕೀಯ ಮಾಡುವುದಲ್ಲ. ಅದೊಂದು ಮನುಷ್ಯನನ್ನು ಕಾಡುವ ಸಾಮಾಜಿಕ ಚಿಂತನೆ ಜೊತೆಗೆ ಒಂದು ತಾತ್ವಿಕ ಸಿದ್ಧಾಂತಿಗಳ ಅಡಿಯಲ್ಲಿ ನಿಲ್ಲುವಂತಾಗಬೇಕೆಂದರು. ಕಾರ್ಯಕ್ರಮದಲ್ಲಿ ಹಳ್ಳಿಯ ಅನೇಕರು ಭಾಗವಹಿಸಿದ್ದರು.