ಅಕ್ಷರ ಮಾಂತ್ರಿಕ ರವಿ ಅಸ್ತಂಗತ

ಬೆಂಗಳೂರು, ನ. ೧೩- ಅಕ್ಷರ ಮಾಂತ್ರಿಕ, ಪತ್ರಕರ್ತ, ಪ್ರಾರ್ಥನಾ ಶಿಕ್ಷಣ ಸಂಸ್ಥೆಯ ಸ್ಥಾಪಕ ರವಿ ಬೆಳಗೆರೆ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ರವಿ ಬೆಳಗೆರೆ ಅವರಿಗೆ ೬೨ ವರ್ಷ ವಯಸ್ಸಾಗಿತ್ತು. ೧೯೯೫ ರಲ್ಲಿ ಹಾಯ್ ಬೆಂಗಳೂರು ಪ್ರಾರಂಭಿಸಿದ ಅವರು, ಕಾದಂಬರಿ, ಅನುವಾದ, ಕಥಾಸಂಕಲನ, ಅಂಕಣ ಬರಹಗಳು, ಜೀವನ ಕಥನ ಒಳಗೊಂಡ ಸುಮಾರು ೭೦ ಪುಸ್ತಕಗಳು ಪ್ರಕಟಗೊಂಡಿವೆ.
ಮೃತ ರವಿ ಬೆಳಗೆರೆ ಅವರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ. ತಡರಾತ್ರಿ ಹೃದಯಾಘಾತಕ್ಕೆ ಒಳಗಾದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಮೃತದೇಹವನ್ನು ಅವರ ನಿವಾಸಕ್ಕೆ ತಂದು, ಪ್ರಾರ್ಥನಾ ಶಾಲೆಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸಂಜೆ ಅವರ ಅಂತ್ಯಕ್ರಿಯೆ ನಡೆಯಿತು.
ಇತಿಹಾಸ ಮತ್ತು ಪ್ರಾಚ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ರವಿ ಬೆಳಗೆರೆ ಪತ್ರಿಕೋದ್ಯಮದ ಕಡೆ ಆಕರ್ಷಿತರಾಗಿ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಹಾಯ್ ಬೆಂಗಳೂರು ಪತ್ರಿಕೆ ಸ್ಥಾಪಿಸಿ, ಸಾಹಿತ್ಯ, ಕ್ರೈಂ, ನಿರೂಪಣೆಗಳ ಮೂಲಕ ಹಾಗೂ ಓ ಮನಸೆ ಇಂದ ಜನಪ್ರಿಯರಾಗಿದ್ದರು.
ಸಂಜೆ ಬಳಿಕ ಬನಶಂಕರಿಯ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಯಿತು.
ಗಮನ ಸೆಳೆದಿದ್ದ ರವಿ ಬೆಳಗೆರೆ:
ತಮ್ಮ ವಿಭಿನ್ನವಾದ ಬರಹದ ಶೈಲಿಯಿಂದ ರಾಜ್ಯಾದ್ಯಂತ ಲಕ್ಷಾಂತರ ಜನರಿಗೆ ಓದಿನ ಗೀಳು ಹತ್ತಿಸಿದ್ದರು. ಪತ್ರಕರ್ತರಾಗಿ, ಸಾಹಿತಿಗಳಾಗಿ, ಅಂಕಣಕಾರರಾಗಿ ಹಾಗೂ ನಿರೂಪಕರಾಗಿ ರವಿ ಬೆಳಗೆರೆ ಅವರು ಗುರುತಿಸಿಕೊಂಡಿದ್ದರು.ನಿನ್ನೆ ರಾತ್ರಿ ತಮ್ಮ ಹೊಸಪುಸ್ತಕಗಳನ್ನು ಬರೆಯುತ್ತಲೇ ನಿದ್ರೆಗೆ ಜಾರಿದ್ದರು. ಅಲ್ಲೇ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ರವಿ ಬೆಳಗೆರೆ ಅವರು, ಇತ್ತೀಚೆಗಷ್ಟೆ ಚೇತರಿಸಿಕೊಂಡು, ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದರು.
ಆರು ಪುಸ್ತಕಕ್ಕೆ ಸಿದ್ಧತೆ
ರವಿ ಬೆಳಗೆರೆ ಅವರು ಒಟ್ಟಿಗೆ ಆರು ಪುಸ್ತಕಗಳನ್ನು ಬರೆದು ಅವುಗಳನ್ನು ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದ್ದರು. ಅವುಗಳನ್ನು ಬರೆಯುತ್ತಿರುವಾಗಲೇ ಸಾವನ್ನಪ್ಪಿದ್ದಾರೆ.
ತಮ್ಮ ಜೀವನದುದ್ದಕ್ಕೂ ಸವಾಲುಗಳನ್ನು ಎದುರಿಸಿದ ಕುರಿತು, ಆತ್ಮ ಚರಿತ್ರೆ ಬರೆಯುವುದರಲ್ಲಿ ನಿರತರಾಗಿದ್ದರು. ಭಾವನಾ ಆಡಿಯೋ, ಭಾವನಾ ಪ್ರಕಾಶನ, ಪ್ರಾರ್ಥನಾ ಶಾಲೆ ಸಂಸ್ಥಾಪಕರೂ ಆಗಿದ್ದರು.
ಹೇಳಿ ಹೋಗು ಕಾರಣ, ಭೀಮಾ ತೀರದ ಹಂತಕರು, ಪಾಪಿಗಳ ಲೋಕದಲ್ಲಿ, ನೀ ಹಿಂಗ ನೋಡಬ್ಯಾಡ ನನ್ನ, ಇಂದಿರೆಯ ಮಗ ಸಂಜಯ, ರಾಜ್ ಲೀಲಾ ವಿನೋದ, ಕಾಮರಾಮ ಮಾರ್ಗ, ಮಾಟಗಾತಿ, ಹಿಮಾಲಯನ್ ಬ್ಲಂಡರ್, ದಂಗೆಯ ದಿನಗಳು, ಮೇಜರ್ ಸಂದೀಪ್ ಹತ್ಯೆ, ನೀನಾ ಪಾಕಿಸ್ತಾನ, ರೇಷ್ಮೆ ರುಮಾಲು ಸೇರಿದಂತೆ, ಅನೇಕ ಕೃತಿಗಳನ್ನು ಬರೆದಿದ್ದರು.
ಸಂತಾಪ
ರವಿ ಬೆಳಗೆರೆ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಕೆ.ಎಸ್. ಈಶ್ವರಪ್ಪ, ಸುಧಾಕರ್, ಶ್ರೀರಾಮುಲು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ, ಸಚಿವರು, ಶಾಸಕರು, ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಾವಲ್ಲ, ಹುಟ್ಟು: ಯೋಗರಾಜ್ ಭಟ್
ಕನ್ನಡ ಅಭಿಮಾನಿಯಾಗಿ ಇದು ರವಿ ಬೆಳಗೆರೆ ಅವರ ಸಾವಲ್ಲ, ಅವರ ಹುಟ್ಟು ಎಂದು ಸಾಹಿತಿ, ನಿರ್ದೇಶಕ ಯೋಗರಾಜ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂತಿಮ ದರ್ಶನ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ -ಮೊನ್ನೆವರೆಗೂ ಫೋನ್‌ನಲ್ಲಿ ರವಿ ಬೆಳಗೆರೆಯೊಂದಿಗೆ ನನ್ನ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದೆ. ಅವರಿಗೆ ಅನಾರೋಗ್ಯ ಕಾಡುತ್ತಲೇ ಇತ್ತು. ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಎಂದು ಹೊರಟುಬಿಟ್ಟಿದ್ದಾರೇನೋ ಅನ್ನಿಸುತ್ತಿದೆ ಎಂದು ಅವರು ಸಂತಾಪ ಸೂಚಿಸಿದರು.

ರವಿ ಬೆಳೆಗೆರೆ ಅವರು ನೆನಪು, ಬರಹಗಳೊಂದಿಗೆ ನಮ್ಮೊಂದಿಗಿದ್ದಾರೆ. ಅವರು ಸಂಗೀತ ಪ್ರಿಯರಾಗಿದ್ದು, ನನ್ನದು ಅವರದ್ದು ಅದ್ಭುತ ಸ್ನೇಹ ಎಂದರು. ನನ್ನ ಚಿತ್ರ, ಹಾಡುಗಳ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದರು. ತುಂಬು ಜೀವನವನ್ನು ನಡೆಸಿದ್ದು, ಧೈರ್ಯಕ್ಕೆ ಮತ್ತೊಂದು ಹೆಸರು ಧೀಮಂತ ಪತ್ರಕರ್ತ ಎಂದರು.

ಎಲ್ಲಾ ಕಲೆಗಳನ್ನು ಮೋಹಿಸಿ ಬದುಕಿದ ಜೀವ ಅವರದ್ದು. ಕಳೆದ ವರ್ಷ ಕರಾವಳಿಯಲ್ಲಿ ನನಗೆ ಪ್ರಶಸ್ತಿ ನೀಡಿದ್ದರು. ಈಗ ಹೋಗಿ ಬನ್ನಿ ಎನ್ನುವುದು ಬಿಟ್ಟರೆ ಬೇರೇನಿಲ್ಲ ಎಂದು ಅವರು ಬೇಸರದಿಂದ ಹೇಳಿದರು.