ಅಕ್ಷರ ಮಾಂತ್ರಿಕ ರವಿಬೆಳಗೆರೆ ಇನ್ನಿಲ್ಲ-ಶಿವಕುಮಾರ್

ವಿಜಯಪುರ.ನ೧೭:ಅಕ್ಷರಗಳ ಮೋಡಿಗಾರ ರವಿಬೆಳಗೆರೆರವರ ಬರವಣಿಗೆಯು ಓದುಗನಿಗೆ ಖುದ್ದು ಅವರೊಂದಿಗೆ ಮಾತನಾಡುತ್ತಿರುವಂತೆ ಭಾಸವಾಗುತ್ತಿತ್ತು. ಅಂತಹ ಬರವಣಿಗೆಗಾರ ರವಿಬೆಳಗೆರೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಡಾ.ಎಂ.ಶಿವಕುಮಾರ್ ತಿಳಿಸಿದರು.
ಅವರು ಇಲ್ಲಿನ ಜಿಲ್ಲಾ ಕಸಾಪ ಕಚೇರಿಯಲ್ಲಿ ಕಸಾಪ ವತಿಯಿಂದ ಏರ್ಪಡಿಸಲಾಗಿದ್ದ ರವಿಬೆಳಗೆರೆರವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಟೌನ್ ಕಸಾಪ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ ಮಾತನಾಡಿ, ರವಿಬೆಳಗೆರೆರವರು ಕೇವಲ ಬರವಣಿಗೆಗಾರರು ಮಾತ್ರವಲ್ಲದೇ, ಅತ್ಯುತ್ತಮ ದೂರದರ್ಶನ ನಿರೂಪಕರಾಗಿ ಅಪರಾಧಿ ಕೃತ್ಯಗಳ ಅನಾವರಣ ಮಾಡುವಲ್ಲಿ ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವಂತಹ ಕಂಚಿನ ಕಂಠದ ಮಾತುಗಾರಿಕೆ ಅವರದಾಗಿತ್ತು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಬಿ.ಹಡಪದ್ ಮಾತನಾಡಿ, ರವಿಬೆಳಗೆರೆವರು ಓ ಮನಸೇ ಮಾಸ ಪತ್ರಿಕೆ ಹಾಗೂ ಹಾಯ್ ಬೆಂಗಳೂರು ವಾರಪತ್ರಿಕೆ, ಮುಂತಾದವುಗಳ ಮೂಲಕ ಲೇಖನಿ ಖಡ್ಗಕ್ಕಿಂತಲೂ ಹರಿತವೆಂದು ತೋರಿಸಿ, ಹಲವಾರು ಅಪರಾಧಗಳ ಸಾಕ್ಷಿ ದೊರೆಯುವಂತಹ ಕೆಲಸಗಳನ್ನು ಮಾಡಿದ್ದರು ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಚಿ.ಮಾ.ಸುಧಾಕರ್ ವಹಿಸಿದ್ದರು. ಕಾರ್ಯಾಧ್ಯಕ್ಷರಾದ ವಿ.ಎನ್.ಸೂರ್ಯಪ್ರಕಾಶ್, ಕಾರ್ಯದರ್ಶಿಗಳಾದ ಆರ್.ಮುನಿರಾಜು, ಎನ್.ಸಿ.ಮುನಿವೆಂಕಟರಮಣಪ್ಪ, ಟೌನ್ ಕಸಾಪ ಸಂಚಾಲಕ ಎನ್.ಮುನಿರಾಜು, ಸಾಂಸ್ಕೃತಿಕ ತಂಡದ ಅಧ್ಯಕ್ಷರಾದ ಎಂ.ವಿ.ನಾಯ್ಡು, ಮಹಂತಿನ ಮಠದ ಕಾರ್ಯದರ್ಶಿ ವಿ.ವಿಶ್ವನಾಥ್, ಮತ್ತಿತರರು ರವಿಬೆಳಗೆರೆರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.