ಅಕ್ಷರ ದಾಸೋಹ ನೌಕರರಿಂದ ಪ್ರತಿಭಟನೆ : ಒಂದು ಕಿಮೀ ರ್‍ಯಾಲಿ

ದೇವದುರ್ಗ.ನ.೧೬- ಅಕ್ಷರ ದಾಸೋಹ ಯೋಜನೆಯಡಿ ದುಡಿಯುತ್ತಿರುವ ನೌಕರರಿಗೆ ಬಾಕಿ ಇರುವ ಐದು ತಿಂಗಳ ವೇತನ ನೀಡುವಂತೆ ಒತ್ತಾಯಿಸಿ ಪಟ್ಟಣದ ತಾಪಂ ಕಚೇರಿ ಮುಂದೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಲ್ಲಿನ ಎಪಿಎಂಸಿ ಆವರಣದಲ್ಲಿ ಜಮಾಹಿಸಿದ ನೂರಾರು ಕಾರ್ಯಕರ್ತರು ಅಲ್ಲಿಂದ ತಾಪಂ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು. ಅಕ್ಷರ ದಾಸೋಹ ನೌಕರರು ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸುತ್ತಿವೆ. ಅಸಮರ್ಪಕ ವೇತನ, ಕಾಂಟೆಜೆನ್ಸಿ ಕೊಡದೆ ಇರುವುದು, ಅನಗತ್ಯ ಕಿರುಕುಳದಿಂದ ನೌಕರರು ಕೆಲಸ ನಿರ್ವಹಿಸಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವ್ಹೆಂಬರ್ ನಾಲ್ಕು ತಿಂಗಳ ವೇತನ ಹಾಗೂ ಮೇನಲ್ಲಿ ದುಡಿದ ೧೫ ದಿನದ ವೇತನ ನೀಡಬೇಕು. ಬಾಕಿರುವ ಐದು ತಿಂಗಳ ಸಾದೀಲ್ವಾರ್ (ಕಾಂಟೆಜನ್ಸಿ) ವೇತನ ತಕ್ಷಣ ನೀಡಬೇಕು. ಜನವರಿಯಿಂದ ಹೆಚ್ಚಳವಾದ ವೇತನ ಬಾಕಿಯಿದ್ದು, ತಕ್ಷಣ ಬಿಡುಗಡೆ ಮಾಡಬೇಕು. ಪ್ರತಿತಿಂಗಳುಉತ್ತಮ ಆಹಾರ ಧಾನ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡಬೇಕು. ಮುಖ್ಯಶಿಕ್ಷಕರು ಹಾಗೂ ಎಸ್ಡಿಎಂಸಿ ಕಿರುಕುಳ ತಪ್ಪಿಸಬೇಕು. ಅಡುಗೆ ಎಲ್ಲ ಜವಾಬ್ದಾರಿ ಮುಖ್ಯ ಅಡುಗೆಯವರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷೆ ಮರಿಯಮ್ಮ, ಖಜಾಂಚಿ ಶೋಭಾ, ಕಾರ್ಯದರ್ಶಿ ಶ್ರೀಲೇಖಾ, ಸಿಐಟಿಯು ತಾಲೂಕು ಸಂಚಾಲಕ ಗಿರಿಯಪ್ಪ ಪೂಜಾರಿ, ನೌಕರರಾದ ಪದ್ಮಾ, ಲಕ್ಷ್ಮಿ, ಮಂಜುಳಾ, ಸಂಗಮ್ಮ, ಪರವಿನ್, ಮುತ್ತಮ್ಮ, ಜಿ.ಎಚ್.ವಿಶ್ವನಾಥ, ಮೌನೇಶ ಮಕ್ತೂಮ್ ಇತರರಿದ್ದರು.