ಅಕ್ಷರ ದಾಸೋಹ ಕಾರ್ಮಿಕರ ಸಮಸ್ಯೆಗಳ ನಿವಾರಣೆಗೆ ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)  
ಬಳ್ಳಾರಿ, ಆ.29: ಅಕ್ಷರ ದಾಸೋಹ ಕಾರ್ಮಿಕರ ಸಮಸ್ಯೆಗಳನ್ನು ನಿವಾರಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದೆ.
ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ತಯಾರು ಮಾಡಿ, ಪ್ರೀತಿಯಿಂದ ಉಣಬಡಿಸುವ ತಾಯಂದಿರುಗಳಾದ ಅಕ್ಷರ ದಾಸೋಹ ಕಾರ್ಮಿಕರು, ತಮ್ಮ ಮಕ್ಕಳನ್ನು ಹಸಿವೆಯಿಂದ ಇಡುವ ಪರಿಸ್ಥಿತಿ ಎದುರಾಗಿದೆ. 3-4 ತಿಂಗಳಾದರೂ, ಅವರ ವೇತನವನ್ನು ನೀಡಿಲ್ಲ. ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ, ಅವರಿಗೆ ನೀಡುವ ವೇತನದಿಂದ ಜೀವನ ನಡೆಸುವುದೇ ಅಸಾಧ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅದರಲ್ಲಿ ಮೂರು ತಿಂಗಳ ವೇತನ ನೀಡಲಿಲ್ಲವೆಂದರೆ, ಅವರು ಕುಟುಂಬ ನಿರ್ವಹಣೆ ಹೇಗೆ ಮಾಡಬೇಕು? ಇದಲ್ಲದೆ ಇವರುಗಳು ಬಹುಮಟ್ಟಿಗೆ ಒಂಟಿ ಹೆಣ್ಣು ಮಕ್ಕಳು ವಿಧವೆಯರು, ಇಡೀ ಕುಟುಂಬದ ಜವಾಬ್ದಾರಿ ಹೊತ್ತಿರುವರೇ ಆಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಅವರ ಬಾಕಿಯಿರುವ 3-4 ತಿಂಗಳ ವೇತನ ಬಿಡುಗಡೆ ಮಾಡಲು ತುರ್ತು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಈ ಯೋಜನೆಯ ಅನುಷ್ಠಾನದಲ್ಲಿನ ಮಕ್ಕಳಿಗೆ ಊಟ, ಹಾಲು, ಮೊಟ್ಟೆ, ಬಾಳೆಹಣ್ಣು ನೀಡುವ ಕೆಲಸಗಳಷ್ಟೇ ಅಲ್ಲದೇ ಅವರ ಕೆಲಸಗಳೇ ಅಲ್ಲದ ಇಡೀ ಶಾಲಾ ಆವರಣದ ಸ್ವಚ್ಚಗೊಳಿಸುವುದು, ಕೈತೋಟದ ಕೆಲಸ ಮಾಡುವುದು, ಅಷ್ಟೇ ಏಕೆ ಶೌಚಾಲಯಗಳ ನಿರ್ವಹಣೆ, ಬೇರಡೆಯಿಂದ ಇಡೀ ಶಾಲೆಗೆ ನೀರನ್ನು ಒದಗಿಸುವ ಜವಾಬ್ದಾರಿ ಕೂಡ ನಿಭಾಯಿಸುತ್ತಿದ್ದಾರೆ. ಕೆಲಸದ ಹೊರೆ ಹೆಚ್ಚಾಗಿ ಹಲವಾರು ಬಾರಿ ಅವರ ಆರೋಗ್ಯ ಕೂಡ ಹದಗೆಡುವಂತಾಗುತ್ತದೆ. ಇದರ ಬಗ್ಗೆ ಕಳೆದ ತಿಂಗಳು ಇಲಾಖೆಯ ಅಧಿಕಾರಿಗಳ ಗಮನಕ್ಕೂ ತಂದಿದ್ದರೂ, ಸೂಕ್ತವಾದ ಪರಿಹಾರವನ್ನು ಇನ್ನೂವರೆಗೆ ನೀಡಿಲ್ಲ. ಈ ಹಿನ್ನಲೆಯಲ್ಲಿ ಬಿಸಿಯೂಟ ನೌಕರರು ಹೆಚ್ಚುವರಿ ಕೆಲಸಗಳಿಂದ ಬಿಡುಗಡೆಗೊಳಿಸುವಂತೆ, ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದೆ ಹಾಗೂ
ಬಿಸಿಯೂಟ ಕಾರ್ಮಿಕರು ಗೌರವಯುತ ಜೀವನ ನಡೆಸಲು ಯೋಗ್ಯವಾದ ವೇತನ ನಿಗದಿ ಮಾಡಿ, ನಿವೃತ್ತಿಯಾಗುವವರಿಗೆ, ಕಾರ್ಮಿಕರ ಪಾಲಿನ ಹಣವನ್ನೂ ಸರ್ಕಾರವೇ ಭರಿಸಿ ಪಿಂಚಣಿ ನೀಡುವ ಸೌಲಭ್ಯ
ಒದಗಿಸಿ. ಮೊಟ್ಟೆ ಸುಲಿಯುವ ಕೆಲಸಕ್ಕೆ ನೀಡಬೇಕಾದ ಪ್ರೋತ್ಸಾಹ ಧನ, ಕೂಡಲೆ ನೀಡಲು ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.
ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ನಾಗರತ್ನ ಬ್ಯಾಲಿಚಿಂತೆ, ತಾಲೂಕು ಅಧ್ಯಕ್ಷರು ಮಂಜುಳಾ ಶ್ರೀಧರಗಡ್ಡೆ, ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಸಂಘದ ಗೌರವ ಸಲಹೆಗಾರರಾದ ನಾಗರತ್ನ ಎಸ್.ಜಿ., ತಾಲೂಕು ಉಪಾಧ್ಯಕ್ಷರು ಲಕ್ಷ್ಮಿ, ಎಐಯುಟಿಯುಸಿ ಜಿಲ್ಲಾಧ್ಯಕ್ಷ ದೇವದಾಸ್, ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಉಪಸ್ಥಿತರಿದ್ದರು.

Attachments area