ಅಕ್ಷರ ದಾಸೋಹ ಕಾರ್ಮಿಕರ ಯೋಗ್ಯ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.23: ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಅಕ್ಷರ ದಾಸೋಹ ಕಾರ್ಮಿಕರ (ಬಿಸಿಯೂಟ ಕಾರ್ಮಿಕರ) ಸಂಘದ ವತಿಯಿಂದ ಯೋಗ್ಯವೇತನಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನು ಜಿಲ್ಲಾ ಪಂಚಾಯತ್ ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಮಾತನಾಡುತ್ತಾ “ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ತಯಾರು ಮಾಡಿ, ಪ್ರೀತಿಯಿಂದ ಉಣಬಡಿಸುವ ತಾಯಂದಿರುಗಳಾದ ಅಕ್ಷರ ದಾಸೋಹ ಕಾರ್ಮಿಕರು, ಲಕ್ಷಾಂತರ ಬಡ ಮಕ್ಕಳ ಹಸಿವನ್ನು ನೀಗಿಸುತ್ತಿದ್ದಾರೆ. ಆದರೆ ಮಕ್ಕಳಿಗೆ ಊಟ, ಹಾಲು, ಮೊಟ್ಟೆ, ಬಾಳೆಹಣ್ಣು ನೀಡುವುದು, ಅಡುಗೆಗೆ ಸಂಬಂಧಪಟ್ಟ ಕೆಲಸಗಳು ಅಲ್ಲದೆ, ಅವರದಲ್ಲದ ಕೆಲಸಗಳಾದ ಶಾಲಾ ಆವರಣ ಹಾಗೂ ಶಾಲಾ ಕೊಠಡಿಗಳ ಸ್ವಚ್ಚತೆ ಕಾಪಾಡುವುದು, ಕೈತೋಟದ ಕೆಲಸ, ಅಷ್ಟೇ ಏಕೆ ಶೌಚಾಲಯಗಳ ನಿರ್ವಹಣೆ ಕೆಲಸ, ಕೂಡ ಮಾಡಿಸಲಾಗುತ್ತಿದೆ. ಇದರಿಂದಾಗಿ ಅವರಿಗೆ ಕೆಲಸದ ಹೊರೆ ಹೆಚ್ಚಾಗುತ್ತಿದ್ದು, ಕೆಲವರ ಆರೋಗ್ಯ ಕೂಡ ಹದಗೆಡುವಂತಾಗಿದೆ. ಇದಲ್ಲದೆ ನಿಗದಿತ ಸಮಯಕ್ಕೆ ವೇತನವೂ ನೀಡದೆ, ಅಕ್ಷರ ದಾಸೋಹ ಕಾರ್ಮಿಕರ ಬದುಕು ಸಂಕಷ್ಟಮಯವಾಗಿದೆ. ಮೊಟ್ಟೆ ನೀಡುವ ಕೆಲಸಕ್ಕೆ ಬರಬೇಕಾದ ಹೆಚ್ಚುವರಿ ಪ್ರೋತ್ಸಾಹ ಧನ ಕೂಡ 8 ತಿಂಗಳಿನಿಂದ ಬಂದಿಲ್ಲ. ಒಟ್ಟಾರೆಯಾಗಿ ಸರ್ಕಾರ ಅತ್ಯಂತ ಕನಿಷ್ಠ ಸಂಬಳ ನೀಡಿ, ಅತಿ ಹೆಚ್ಚು ಕೆಲಸಗಳನ್ನು ಅಕ್ಷರ ದಾಸೋಹ ಕಾರ್ಮಿಕರಿಂದ ಮಾಡಿಸಿಕೊಳ್ಳುತ್ತಿದೆ. ಕೂಡಲೆ ಸರ್ಕಾರ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಳ್ಳಬೇಕು. ಇಲ್ಲವಾದ್ದಲ್ಲಿ ಉಗ್ರ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ” ಎಂದು ಈ ಸಂದರ್ಭದಲ್ಲಿ ಎಚ್ಚರಿಸಿದರು.
ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಎ.ದೇವದಾಸ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು, ಅಧಿಕಾರಿಗಳೊಂದಿಗೆ ಸಮಸ್ಯೆಗಳ ಕುರಿತು ಚರ್ಚಿಸಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪರವಾಗಿ ಉಪ ಕಾರ್ಯದರ್ಶಿಗಳು ಆಗಮಿಸಿ, ಸಮಸ್ಯೆಗಳನ್ನು ಆಲಿಸಿ, ಬಿಸಿಯೂಟ ಕಾರ್ಮಿಕರಿಗೆ ಯಾವುದೇ ಹೆಚ್ಚುವರಿ ಕೆಲಸಗಳನ್ನು ನೀಡಬಾರದೆಂಬ ಲಿಖಿತ ಆದೇಶವನ್ನು ಎಲ್ಲಾ ಶಾಲೆಗಳಿಗೆ ಕಳುಹಿಸುವುದಾಗಿ ಭರವಸೆ ನೀಡಿದರು. ಮೊಟ್ಟೆ ನೀಡುವ ಕೆಲಸಕ್ಕೆ ಬರಬೇಕಾದ ಪ್ರೋತ್ಸಾಹ ಧನ, ಬಾಕಿಯಿರುವ ವೇತನ ಬಿಸಿಯೂಟ ನೌಕರರಿಗೆ ತಲುಪಿಸಲು ಕೂಡಲೆ ಕ್ರಮಕೈಗೊಳ್ಳಲಾಗುವುದೆಂದು ಕೂಡ ಭರವಸೆ ನೀಡಿದರು.
ಅಕ್ಷರ ದಾಸೋಹ ಕಾರ್ಮಿಕರ ಸಂಘದ ಸಲಹೆಗಾರರಾದ ನಾಗರತ್ನ.ಎಸ್.ಜಿ ಮಾತನಾಡಿದರು.
  ಪ್ರತಿಭಟನೆಯ ಅಧ್ಯಕ್ಷತೆಯನ್ನು ಎಐಯುಟಿಯುಸಿ ಜಿಲ್ಲಾ ಜಂಟಿ ಕಾರ್ಯದರ್ಶಿಗಳಾದ ಸುರೇಶ್.ಜಿ ವಹಿಸಿದ್ದರು. ಜಿಲ್ಲಾ ಉಪಾದ್ಯಕ್ಷರಾದ ಶಾಂತಾ ಉಪಸ್ಥಿತರಿದ್ದರು. ಅಕ್ಷರ ದಸೋಹ ಕಾರ್ಮಿಕರ ಸಂಘದ ಮುಖಂಡರಾದ ಲಕ್ಷ್ಮಿ, ಮಂಜುಳಾ, ಗೀತಾ, ಲತಾ, ಗೋವಿಂದಮ್ಮ, ಗಾದಿಲಿಂಗಮ್ಮ, ಶಾಂತಮ್ಮ ಮುಂತಾದವರು ಉಪಸ್ಥಿತರಿದ್ದರು.

Attachments area