ಅಕ್ಷರ ದಾಸೋಹದ ನಡಿಗೆ ಮಕ್ಕಳ ಮನೆ ಕಡೆಗೆ

ಚಾಮರಾಜನಗರ, ಜೂ.01- ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಾಡಂಚಿನ ಗ್ರಾಮದಲ್ಲಿರುವ ಹೊಂಗಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಇಂದು ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಶಾಲಾ ವತಿಯಿಂದ ಅಕ್ಷರ ದಾಸೋಹದ ನಡಿಗೆ ಮಕ್ಕಳ ಮನೆ ಕಡೆಗೆ ಎಂಬ ಘೋಷವಾಕ್ಯದಡಿ ಎತ್ತಿನಗಾಡಿಗಳ ಮೂಲಕ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.
ಎಸ್ ಡಿಎಂಸಿ ಅವರ ಸಹಕಾರದಿಂದ ಇಂದು ಬೆಳಿಗ್ಗೆ 8 ರಿಂದ 10 ರವರೆಗೆ ಶಾಲೆಯ 111 ಮಕ್ಕಳ ಮನೆಮನೆಗೆ ಎತ್ತಿನಗಾಡಿ ಮೂಲಕ ತೆರಳಿ ಸರ್ಕಾರ ನಿಗದಿಪಡಿಸಿರುವ ಪ್ರಮಾಣದಲ್ಲಿ 83 ದಿನದ ಅಕ್ಕಿ, ಗೋಧಿ ,ಎಣ್ಣೆ, ಉಪ್ಪು ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.
ಈ ಕುರಿತು ಮಾತನಾಡಿದ ಮುಖ್ಯ ಶಿಕ್ಷಕ ಬಿ.ಮಹದೇಶ್ವರಸ್ವಾಮಿ ಅವರು, ಕೊರೊನಾ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಇಲ್ಲದ ಪರಿಣಾಮ ಶಿಕ್ಷಣ ಇಲಾಖೆ ಮಕ್ಕಳ ಅನುಕೂಲಕ್ಕಾಗಿ ಪಡಿತರ ವಿತರಿಸಿದ್ದು ಇದರ ಜೊತೆಗೆ ದಾನಿಗಳ ಸಹಕಾರದಿಂದ ಪ್ರತಿ ವಿದ್ಯಾರ್ಥಿಗೆ ಒಂದು ಡಜನ್ ಬಿಸ್ಕತ್ತು ವಿತರಿಸಿ ಕೊರೊನಾ ಜಾಗೃತಿ ಸಹ ಮೂಡಿಸಲಾಗಿದೆ ಎಂದರು.
ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಮಾದಪ್ಪ, ಉಪಾಧ್ಯಕ್ಷ ಸುಬ್ಬಪ್ಪ, ಸದಸ್ಯ ಸ್ವಾಮಿ, ಗುರುಸ್ವಾಮಿ, ಸುಧಾ, ರಾಣಿ ಎಲ್ಲರೂ ಸಹ ಈ ವೇಳೆ ಹಾಜರಿದ್ದು ಒಂದೇ ರೀತಿಯ ಸಮವಸ್ತ್ರ ಧರಿಸಿ ಗಮನ ಸೆಳೆದರು.