ಅಕ್ಷರಸ್ಥರ ಜತೆಗೆ ಒಳ್ಳೆ ವ್ಯಕ್ತಿತ್ವ ಅಗತ್ಯ

ಕೋಲಾರ,ಡಿ,೨೪- ವಿದ್ಯಾರ್ಥಿಗಳು ಓದಿಕೊಂಡು ಅಕ್ಷರವಂತರಾಗುವ ಜತೆಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಬೇಕೆಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹೇಳಿದರು.
ನಗರ ಹೊರವಲಯದ ಟಮಕದ ಸರ್ ಎಂ ವಿಶ್ವೇಶ್ವರಯ್ಯ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ ಮಕ್ಕಳು ಸಂವಿಧಾನ ತಿಳಿದುಕೊಳ್ಳುವ ಮೂಲಕ ಧರ್ಮ, ಕೋಮು ಹಾಗೂ ಭಾಷಾ ಸೌಹಾರ್ದತೆಯನ್ನು ಕಾಪಾಡಬೇಕೆಂದರು.
ಕ್ರೀಡೆಯಿಂದ ಸಮಾನತೆ, ಅರೋಗ್ಯ, ಕೌಶಲ್ಯ ಮತ್ತು ಉತ್ತಮ ವ್ಯಕ್ತಿತ್ವ ಬೆಳೆಯುವುದರಿಂದಾಗಿ ಎಲ್ಲ ವಿದ್ಯಾರ್ಥಿಗಳು ಆಟೋಟಗಳಲ್ಲಿ ಭಾಗವಹಿಸಬೇಕು. ಮಕ್ಕಳು ಬುದ್ದಿವಂತರಾಗುವ ಮೂಲಕ ತಂದೆ-ತಾಯಿ ಶಿಕ್ಷಣ ಸಂಸ್ಥೆಗೆ ಹೆಸರು ತರಬೇಕು. ಪೋಷಕರು ಮನೆಯಲ್ಲಿ ಟಿವಿ ಮಕ್ಕಳಿಗೆ ಹಾನಿಕರ ಆಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ನಗರ ಮತ್ತು ಗ್ರಾಮಾಂತರ ವಿದ್ಯಾರ್ಥಿಗಳ ಬುದ್ದಿವಂತಿಕೆಯ ನಡುವೆ ಇತ್ತೀಚಿನ ದಿನಗಳಲ್ಲಿ ಅಂತರ ಕಡಿಮೆ ಆಗುತ್ತಿದ್ದು ಇದರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವರವಾಗಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷರಾದ ಮೇಸ್ತ್ರಿ ನಾರಾಯಣಸ್ವಾಮಿ ಮಾತನಾಡಿ ಉತ್ತಮ ಶಿಕ್ಷಣ ಸಂಸ್ಥೆಯನ್ನು ಕಟ್ಟುವ ಮೂಲಕ ಕೋಲಾರ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದ್ದು ಈ ವಿಷಯದಲ್ಲಿ ಮಕ್ಕಳಾದ ಶಬರೀಶ್, ರಮೇಶ್ ಅವರು ಶಾಲೆಯನ್ನು ಮಾದರಿಯಾಗಿ ಮುನ್ನಡೆಸುತ್ತಿದ್ದಾರೆಂದು ಶ್ಲಾಘಿಸಿದರಲ್ಲದೆ ಸರ್‌ಎಂವಿ ಹೆಸರಿನ ಶಾಲೆಯ ಮಕ್ಕಳು ವಿಶ್ವೇಶ್ವರಯ್ಯನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಶಾಲಾ ಕಾರ್ಯದರ್ಶಿ ರಮೇಶ್ ಯಾದವ್ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆ ವಿಚಾರಗಳನ್ನು ಗ್ರಹಿಸುವ ಮೂಲಕ ಉತ್ತಮ ನಡವಳಿಕೆಯನ್ನು ರೂಪಿಸಿಕೊಳ್ಳಬೇಕೆಂದು ನುಡಿದರು.
ಶಾಲಾ ಸಂಸ್ಥಾಪಕ ಮೇಸ್ತ್ರಿ ನಾರಾಯಣಸ್ವಾಮಿ, ರಾಧಮ್ಮ, ನಾರಾಯಣ ಸ್ವಾಮಿ, ಆಡಳಿತಾಧಿಕಾರಿ ಶ್ವೇತಾಶಬರೀಶ್, ಪ್ರಿನ್ಸಿಪಾಲ್ ಶ್ರೀದೇವಿ ಇದ್ದರು.