ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ

ಇಂಡಿ :ಜ.4:ಶಿಕ್ಷಣವೆಂದರೆ ತಿಳಿಯದ,ಅಕ್ಷರಗಳೆಂದರೆ ಗೊತ್ತಿಲ್ಲದ ಕಾಲದಲ್ಲಿ ಶಾಲೆಗಳನ್ನು ತೆರೆದು ಭಾರತದಲ್ಲಿ ಅಕ್ಷರ ಕ್ರಾಂತಿ ಮಾಡಿದ ಮೊದಲ ಮಹಿಳೆ ಸಾವಿತ್ರಿಬಾಯಿ ಫುಲೆ ದಂಪತಿ.ಭಾರತದ ಶಿಕ್ಷಣ ವ್ಯವಸ್ಥೆಗೆ ಫುಲೆ ದಂಪತಿಗಳ ಕೊಡುಗೆ ಅಪಾರ.ದಾಸ್ಯ ವಿಮೋಚನೆಗಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ಅಜ್ಞಾನ ವಿಮೋಚನೆಗೆ ಅಕ್ಷಾರ ಕ್ರಾಂತಿ ಮಾಡಿದ ಸಾಮಾಜಿಕ ಬದಲಾವಣೆಯ ಹರಿಕಾರರು ಎಂದು ಆದರ್ಶ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಪತ್ರಕರ್ತ ಐ.ಸಿ.ಪೂಜಾರ ಹೇಳಿದರು.

ಅವರು ಭಾನುವಾರ ಪಟ್ಟಣದ ಕರ್ನಾಟಕ ಪತ್ರ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪ್ರುಶರಷ್ಟೇ ಶೋಷಣೆಗೆ ಒಳಗಾದ ಇನ್ನೊಂದು ವರ್ಗವೆಂದರೆ ಮಹಿಳೆಯರು.ಶಿಕ್ಷಣದ ಮುಖಾಂತರ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಸಮಾನತೆಯನ್ನು ತರುವುದು ಸಾಧ್ಯ ಎಂದು ತಿಳಿದು,ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಮಹಾತ್ಮಾ ಜ್ಯೋತಿಬಾ ಫುಲೆ ಅವರು ಪುಣೆ ನಗರದಲ್ಲಿ ಶಾಲೆಯನ್ನು ತೆರೆದು ಅದಕ್ಕೆ ಸಾವಿತ್ರಿಬಾಯಿ ಫುಲೆ ಅವರನ್ನು ಮೊದಲ ಶಿಕ್ಷಕಿಯಾಗಿ ನೇಮಕ ಮಾಡಿ,ಅಬಲೆಯರ ಕೈಗೆ ಅಕ್ಷರಾಯುಧ ಕೊಟ್ಟವರು ಸಾವಿತ್ರಿಬಾಯಿ ಫುಲೆ. ಮಹಿಳೆಯರಿಗೆ ಶಿಕ್ಷಣ ನೀಡಿ ಮೊದಲ ಶಿಕ್ಷಕಿ,ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ ಬೆಳಗಿದರು ಎಂದು ಹೇಳಿದರು.

ಸಾಮಾಜಿಕ ಪರಿವರ್ತನಾ ಚಳುವಳಿಯ ಸಾರಥಿಗಳಾಗಿದ್ದ ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗೆ ಸರ್ಕಾರ ಭಾರತ ರತ್ನ ಪ್ರಶಸ್ತಿಯನ್ನು ಮರಣೊತ್ತರವಾಗಿ ನೀಡಿ ಗೌರವಿಸಬೇಕು.ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವಾದ ಜ.3 ರಂದು ರಾಷ್ಟ್ರೀಯ ಶಿಕ್ಷಕಿ ದಿನವೆಂದು ಸರ್ಕಾರ ಘೋಷಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಖಾಜು ಸಿಂಗೆಗೋಳ ಮಾತನಾಡಿ,ಸಾವಿತ್ರಿಬಾಯಿ ಫುಲೆ ಅವರು ಒಬ್ಬ ಪ್ರಬುದ್ಧ ಲೇಖಕಿ ಮತ್ತು ಕವಿಯತ್ರಿಯೂ ಆಗಿದ್ದರು.ಸಾವಿತ್ರಿಬಾಯಿ ಫುಲೆ ಅವರ ಸಾಮಾಜಿಕ ಚಳುವಳಿಯಿಂದ ಪ್ರೇರಿತರಾಗಿದ್ದ ವಾಳ್ವೇಕರ ಎಂಬುವವರು ಗ್ರಹಿಣಿ ಎಂಬ ನಿಯತಕಾಲಿಕೆಯನ್ನು ಪ್ರಾರಂಭಿಸಿದ್ದರು. ಇಂದು ಹಿಂದುಳಿದ ವರ್ಗದ ಎಲ್ಲ ಮಹಿಳೆಯರು ಶಿಕ್ಷಣವಂತರಾಗಿ,ಸಬಲೆಯಾಗಿದ್ದರೆ ಅದಕ್ಕೆ ಸಾವಿತ್ರಿಬಾಯಿ ಫುಲೆ ಅವರೇ ಕಾರಣ ಎಂದು ಹೇಳಿದರು.

ಸಾವಿತ್ರಿಬಾಯಿ ಫುಲೆ ದಂಪತಿ ಅವರು ಸರಳ ಜೀವನ ಸಾಗಿಸುತ್ತಿದ್ದರು. ಖಾದಿ ಸೀರೆಯನ್ನೆ ಧರಿಸುತ್ತಿದ್ದರು. ಶಿಕ್ಷಣದ ಪ್ರಸಾರ ಹಾಗೂ ಇವರಲ್ಲಿನ ಶಿಕ್ಷಣ ಕಳಕಳಿಯನ್ನು ಕಂಡು ಬ್ರಿಟೀಷ ಸರಕಾರ ಪ್ರಶಸ್ತಿ ನೀಡಿ ಗೌರವಿಸಿದೆ.ಮಹಿಳೆಯರು ಸಾವಿತ್ರಿಬಾಯಿ ಫುಲೆ ಮಾರ್ಗದರ್ಶನ,ಅವರು ನಡೆದ ದಾರಿಯನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು.

ಪತ್ರಕರ್ತರಾದ ಶರಣಬಸಪ್ಪಾ.ಎನ್ ಕಾಂಬಳೆ,ಜೈಭೀಮ ಸಿಂಗೆ,ರಾಮಚಂದ್ರ ಯಂಕಂಚಿ,ಗ್ರಾಪಂ ಸದಸ್ಯ ಭೀಮ ನಾಗರಾಳ, ವಿಜಯಕುಮಾರ ಡೋಳ್ಳೆನವರ,ರಮಜಾನ ಶೇಖ,ಬಶೀರ ಇತರರು ಈ ಸಂದರ್ಭದಲ್ಲಿ ಇದ್ದರು.