ಅಕ್ಷರದ ಹಣತೆ ಬೆಳಗಿದ ಶಿಕ್ಷಕ, ಎಫ್.ಎಲ್.ಎನ್ ಸಾಧನೆ ಮಾಡಿದ ವಿದ್ಯಾರ್ಥಿಗಳು

ಚಿತ್ರದುರ್ಗ. ಸೆ.೧೧; ಸೇವೆ ಸೇವೆ ಸೇವೆ ನಾನು ಹಚ್ಚಿಟ್ಟ ನಂದಾದೀಪ’ ಎಂಬ ಮಲ್ಲಾಡಿಹಳ್ಳಿಯ ‘ತಿರುಕ’ ನಾಮಾಂಕಿತ ಶ್ರೀ ರಾಘವೇಂದ್ರ ಸ್ವಾಮೀಜಿಯವರ ನುಡಿಯಂತೆ ಸೇವಾ ಮನೋಭಾವನೆ, ಶಿಸ್ತು, ಸಮಯಪಾಲನೆ, ಸ್ವಚ್ಚತೆಯ ಪರಿಕಲ್ಪನೆಯೊಂದಿಗೆ ಮಕ್ಕಳಲ್ಲಿ ಶೇ 100 ರಷ್ಷು ಕಲಿಕಾ ಸಾಮರ್ಥ್ಯ ಬೆಳೆಸಿ ಎಫ್.ಎಲ್.ಎನ್(ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ) ಸಾಧನೆ ಮಾಡಿರುವವರು ಕ್ರಿಯಾಶೀಲ ಶಿಕ್ಷಕ ಸಿ.ಎಸ್. ನಾಗೇಂದ್ರಪ್ಪಹಿರಿಯೂರು ತಾಲೂಕಿನಿಂದ 9 ಕಿ.ಮೀ ದೂರದಲ್ಲಿರುವ 60 ಕುಟುಂಬಗಳು ವಾಸಿಸುತ್ತಿರುವ 296 ಜನಸಂಖ್ಯೆ ಹೊಂದಿರುವ ಚಿಕ್ಕ ಗ್ರಾಮ ಕೆರೆ ಕೋಡಿಹಟ್ಟಿ. ಸಾರಿಗೆ ಸೌಕರ್ಯವಿಲ್ಲದ ಈ ಗ್ರಾಮದಲ್ಲಿ ನೋಡುಗರಿಗೆ ಶಿಸ್ತು, ಸಮಯ ಪಾಲನೆ, ಸ್ವಚ್ಚತೆಯ ಪಾಠ ಹೇಳಿಕೊಡುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದಿದೆ. ಪ್ರಸ್ತುತ ಈ ಶಾಲೆಯಲ್ಲಿ 26 ಮಕ್ಕಳು ಕಲಿಯುತ್ತಿದ್ದು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರೇ ಸಿ.ಎಸ್.ನಾಗೇಂದ್ರಪ್ಪ. ಪಿ.ಯು.ಸಿ, ಟಿ.ಸಿ.ಹೆಚ್ ಮತ್ತು ಬಿ.ಎ ಪದವೀಧರರಾದ ಇವರು. 01-01-1996 ರಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸುಂಡವಾಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿ, 8 ವರ್ಷಗಳ ಸೇವೆಯ ನಂತರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಸಪ್ಪನ ಮಾಳಿಗೆಯ ಸರ್ಕಾರಿ ಶಾಲೆಗೆ 20-06-2003ರಲ್ಲಿ ವರ್ಗಾವಣೆಗೊಂಡು ಕಾರ್ಯ ನಿರ್ವಹಿಸಿ 2006 ರಲ್ಲಿ ಕೆರೆ ಕೋಡಿಹಟ್ಟಿ ಸ.ಕಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು ಪ್ರಸ್ತುತ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಖ್ಯಾತ ತತ್ವಜ್ಞಾನಿ ಕನ್‌ಫ್ಯೂಷಿಯಸ್ ಹೇಳಿರುವಂತೆ ‘ಶಿಕ್ಷಣ ನಮಗೆ ಸ್ವ-ನಂಬಿಕೆಯನ್ನು ಬೆಳೆಸುತ್ತದೆ. ಸ್ವ-ನಂಬಿಕೆ ನಮ್ಮಲ್ಲಿ ಆಶಾಭಾವನೆ ತುಂಬುತ್ತದೆ. ಆಶಾಭಾವನೆ ವಿಶ್ವ ಶಾಂತಿಯನ್ನು ಬೆಳೆಸುತ್ತದೆ’ ಶಿಕ್ಷಣ ಎಂದರೆ ಭವಿಷ್ಯದ ಪೀಳಿಗೆಗೆ ನಾವು ಮಾಡುವ ಹೂಡಿಕೆಯಾಗಿದೆ. ಇದು ಕೇವಲ ಆರ್ಥಿಕ ಹೂಡಿಕೆಯಾಗಿರದೆ ಮಕ್ಕಳಲ್ಲಿ ಸ್ವಾಭಿಮಾನ, ಪ್ರಾಮಾಣಿಕತೆ, ನಿರಂತರ ಪ್ರಯತ್ನ, ದೇಶಭಕ್ತಿ ಮನೋಭಾವನೆ ಬೆಳೆಸುವುದಾಗಿದೆ. ಇಂತಹ ಮನೋಭಾವನೆ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾದುದಾಗಿದ್ದು ಈ ನಿಟ್ಟಿನಲ್ಲಿ ಶಿಕ್ಷಕ ನಾಗೇಂದ್ರಪ್ಪ ಪಠ್ಯ ವಿಷಯದ ಜೊತೆಗೆ ಮಕ್ಕಳಿಗೆ ಸ್ವಚ್ಚತೆಯ ಪಾಠ ಹೇಳಿಕೊಡುವುದರ ಮೂಲಕ ಆತ್ಮವಿಶ್ವಾಸ ಬೆಳೆಸಿದ್ದಾರೆ.ಭೌತಿಕ ಪರಿಸರ; 2006 ರಲ್ಲಿ ಈ ಗ್ರಾಮದಲ್ಲಿ ಶಾಲಾ ಕೊಠಡಿ ಒಂದೇ ಇದ್ದು ಅದು ಸೀಮೆ ಜಾಲಿಯಿಂದ ಆವೃತ್ತವಾಗಿತ್ತು. ಶಾಲೆ ಮತ್ತು ಶಿಕ್ಷಣದ ಪರಿಕಲ್ಪನೆ ಇಲ್ಲದಿರುವ ಸಂದರ್ಭದಲ್ಲಿ ಜನರ ಮನವೊಲಿಸಿ, ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿ ಶಾಲಾ ಆವರಣ ಸ್ವಚ್ಚಗೊಳಿಸಲಾಯಿತು. ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪೋಷಕರಿಗೆ ತಿಳಿಸಿ ಬೋಧನೆ ಪ್ರಾರಂಭಿಸಿದೆ. ಅಂದಿನಿAದ ಇಲ್ಲಿಯವರೆಗೂ ಪೋಷಕರು ಉತ್ತಮ ಸಹಕಾರ ನೀಡುತ್ತಾ ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸುತ್ತಾರೆ. ಎನ್ನುತ್ತಾರೆ ಶಿಕ್ಷಕ ನಾಗೇಂದ್ರಪ್ಪ.ಮಕ್ಕಳ ಸ್ನೇಹಿ ಕಲಿಕಾ ವಾತಾವರಣ: ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರ: ಆಚಾರ್ಯಸ್ಯ ಪ್ರಭಾವೇನ ಶಿಷ್ಯಭವತಿ ಸುಶಿಕ್ಷಿತ: ಎಂಬ ನುಡಿಯಂತೆ ವಿದ್ಯಾರ್ಥಿಯ ಸರ್ವಾಂಗೀಣ ವಿಕಾಸದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ತರಗತಿ ಕೋಣೆಯಲ್ಲಿ ದೇಶದ ಭವಿಷ್ಯ ನಿರ್ಮಾಣವಾಗುತ್ತದೆ ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಪಠ್ಯ ವಿಷಯವನ್ನು ಕಲಿಕೆಗೆ ಪೂರಕವಾದ ಕಥೆ, ಹಾಡು, ಚಟುವಟಿಕೆಗಳನ್ನು ಬಳಸಿಕೊಂಡು ಮಕ್ಕಳಿಗೆ ಅತ್ಯಂತ ಪ್ರೀತಿಯಿಂದ ಹೇಳಿಕೊಡುತ್ತಾರೆ.