ಅಕ್ರಮ ಹಣ ವರ್ಗಾವಣೆ ರಾವುತ್ ನಿವಾಸಕ್ಕೆ ಇಡಿ ಲಗ್ಗೆ


ಮುಂಬೈ,ಜು.೩೧- ಅಕ್ರಮ ಹಣವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಮುಖಂಡ ಸಂಜಯ್‌ರಾವುತ್ ನಿವಾಸಕ್ಕೆ ಇಂದು ಬೆಳಿಗ್ಗೆ ಜಾರಿನಿರ್ದೇಶನಾಲಯದ ಅಧಿಕಾರಿಗಳು ಹಠಾತ್ ದಾಳಿ ನಡೆಸಿ ಶೋಧಕಾರ್ಯ ನಡೆಸಿದ್ದಾರೆ.
ಪತ್ರಾಚಾಲ್ ಭೂ ಹಗರಣ ಕುರಿತಂತೆ ಸಂಜಯ್‌ರಾವುತ್ ಪತ್ನಿ, ನಿಕಟವರ್ತಿಗಳು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.
ಭೂಹಗರಣಕ್ಕೆ ಸಂಬಂಧಿಸಿದಂತೆ ಜು. ೨೦ ಮತ್ತು ೨೭ ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಂಜಯ್‌ರಾವುತ್ ಅವರಿಗೆ ಎರಡು ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದರೆ, ರಾವುತ್ ಅವರು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಲಿಖಿತ ಉತ್ತರದ ಮೂಲಕ ಅವರ ಪರ ವಕೀಲರು ತಿಳಿಸಿದರು.
ಇದರ ಬೆನ್ನಲ್ಲೆ ರಾವುತ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿ ಭೂಹಗರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯಸಭಾ ಸದಸ್ಯ ಸಂಜಯ್‌ರಾವುತ್ ತಾವು ಯಾವುದೇ ತಪ್ಪು ಮಾಡಿಲ್ಲ. ರಾಜಕೀಯ ಹಾಗೂ ದ್ವೇಷದ ಕಾರಣ ತಮ್ಮನ್ನು ಗುರಿಯಾಗಿರಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ರಾವುತ್ ಗುಡುಗು
ನಾನು ಸತ್ತರೂ ಶಿವಸೇನೆ ಬಿಡುವುದಿಲ್ಲ. ಹಾಗೆಯೇ ಇಡಿಗೂ ಶರಣಾಗುವುದಿಲ್ಲ ಎಂದು ಟ್ವಿಟರ್‌ನಲ್ಲಿ ಗುಡುಗಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಇಡಿ ಅಧಿಕಾರಿಗಳು ನಡೆಸುತ್ತಿರುವ ತನಿಖೆ ಸುಳ್ಳು ಸಾಕ್ಷ್ಯವನ್ನಾಧರಿಸಿದೆ ಎಂದು ಕಿಡಿ ಕಾರಿದ್ದಾರೆ.
ತಮಗೂ ಪತ್ರಾಚಾಲ್ ಭೂಹಗರಣಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಮೇಲೆ ಪ್ರಮಾಣ ಮಾಡಿದ್ದಾರೆ.
ಬಾಳ್‌ಠಾಕ್ರೆ ಅವರು ನಮಗೆ ಹೋರಾಟ ಮಾಡುವುದನ್ನು ಕಲಿಸಿದ್ದಾರೆ. ನಾನು ಶಿವಸೇನೆಗಾಗಿ ಹೋರಾಟ ಮುಂದುವರೆಸುತ್ತೇನೆ ಎಂದು ಅವರು ಹೇಳಿದ್ದಾರೆ.