ಅಕ್ರಮ ಹಣ ವರ್ಗಾವಣೆ ನಟಿ ಜಾಕ್ವೆಲಿನ್ ಗೆ ಇಡಿ ಸಮನ್ಸ್

ನವದೆಹಲಿ, ಡಿ. 6- ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಗೆ ಸಂಕಷ್ಟ ಎದುರಾಗಿದೆ.ಈ ಸಂಬಂಧ ಜಾರಿ ನಿರ್ದೇಶನಾಲಯ ಇಂದು ಸಮನ್ಸ್ ಜಾರಿಗೊಳಿಸಿ, ಡಿಸೆಂಬರ್ 8ರಂದು ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್ ಅವರಿಗೆ ಸೂಚಿಸಿದೆ.

ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಅವರ ಹೆಸರು ಕೇಳಿಬಂದಿದ್ದು, ಈ ಪ್ರಕರಣದ ಪ್ರಮುಖ ರೂವಾರಿ ಸುಕೇಶ್‌ ಚಂದ್ರಶೇಖರ್‌ ಜೊತೆಗೆ ಜಾಕ್ವೆಲಿನ್ ಹೆಸರು ತಳುಕು ಹಾಕಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಒಮ್ಮೆ ಜಾರಿ ನಿರ್ದೇಶನಾಲಯ ಜಾಕ್ವೆಲಿನ್‌ಗೆ ನೋಟಿಸ್‌ ಕೂಡ ನೀಡಿತ್ತು. ಅಲ್ಲದೆ ನಿನ್ನೆ ಭಾರತ ಬಿಟ್ಟು ಹೊಗದಂತೆ ಬಾಲಿವುಡ್ ನಟಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದ ಬೆನ್ನಲ್ಲೇ ಇಂದು ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ಶ್ರೀಲಂಕಾ ಮೂಲದ ಜಾಕ್ವೆಲಿನ್​​ ಅವರಿಗೆ ಚಂದ್ರಶೇಖರ್ ₹ 10 ಕೋಟಿ ಮೌಲ್ಯದ ವಸ್ತುಗಳನ್ನು ಉಡುಗೊರೆಯಾಗಿ ನೀಡಿರುವುದು ಬಯಲಾಗಿದೆ. ಇದರಲ್ಲಿ ₹ 52 ಲಕ್ಷ ಮೌಲ್ಯದ ಕುದುರೆ ಮತ್ತು ₹ 9 ಲಕ್ಷ ಮೌಲ್ಯದ ಪರ್ಷಿಯನ್ ಬೆಕ್ಕು ಸೇರಿವೆ ಎಂದು ಇಡಿ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.