ಅಕ್ರಮ ಹಣ ವರ್ಗಾವಣೆ : ದೇಶ್‌ಮುಖ್ ಬಂಧನ

ಮುಂಬೈ, ನ. ೨: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯದ ಎನ್.ಸಿ.ಪಿ ಪಕ್ಷದ ಮುಖಂಡ, ಮಾಜಿ ಗೃಹ ಸಚಿವ, ಅನಿಲ್ ದೇಶಮುಖ್ ಅವರನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಜಾರಿ ನಿರ್ದೇಶನಾಲಯ (ಇಡಿ) ತಂಡ ಬಂಧಿಸಿದ ಘಟನೆ ತಡರಾತ್ರಿ ಮುಂಬೈನಲ್ಲಿ ನಡೆದಿದೆ.
ಮಂಗಳವಾರ ಅವರನ್ನು ಇ.ಡಿ. ಅಧಿಕಾರಿಗಳು ಮುಂಬೈನ ಸಕ್ಷಮ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಅವರನ್ನು ವಶಕ್ಕೆ ಒಪ್ಪಿಸುವಂತೆ ಇ.ಡಿ. ತಂಡ ನ್ಯಾಯಾಲಯಕ್ಕೆ ಕೋರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ದೇಶಮುಖ್ ಬಂಧನಕ್ಕೂ ಮುನ್ನ, ನಿನ್ನೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ಸತತ ೧೨ ಗಂಟೆಗಳ ಕಾಲ ಇ.ಡಿ. ಅಧಿಕಾರಿಗಳು ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದರು. ಸಾಲುಸಾಲು ಪ್ರಶ್ನೆಗಳ ಸುರಿಮಳೆಗೈದಿದ್ದರು. ಅಂತಿಮವಾಗಿ ತನಿಖೆಗೆ ಸೂಕ್ತ ಸಹಕಾರ ನೀಡದ ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿದೆ.
ವೀಡಿಯೋ ಸಂದೇಶ:

ಈ ನಡುವೆ ತನಿಖೆಗೆ ಹಾಜರಾಗುವುದಕ್ಕೂ ಮುನ್ನ ವೀಡಿಯೋ ಸಂದೇಶ ಬಿಡುಗಡೆ ಮಾಡಿದ್ದ ಅನಿಲ್ ದೇಶಮುಖ್ ರವರು ಇ.ಡಿ. ಅಧಿಕಾರಿಗಳ ವಿರುದ್ದ ಅಸಮಾಧಾನ ಹೊರಹಾಕಿದ್ದರು. ‘ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಆರೋಪಗಳು ನಿರಾಧಾರವಾಗಿದೆ. ಈ ಹಿಂದೆಯೂ ಸಿಬಿಐ ಅಧಿಕಾರಿಗಳ ಎದುರು ಎರಡು ಬಾರಿ ವಿಚಾರಣೆಗೆ ಹಾಜರಾಗಿದ್ದೆ. ಪ್ರಸ್ತುತ ನನ್ನ ಅರ್ಜಿ ಸುಪ್ರೀಂಕೋರ್ಟ್ ನಲ್ಲಿದ್ದು, ಅರ್ಜಿಯ ವಿಚಾರಣೆಗೆ ಇನ್ನಷ್ಟು ಸಮಯ ಬೇಕಾಗುತ್ತದೆ. ಈ ಕಾರಣದಿಂದ ಸ್ವಯಂಪ್ರೇರಿತನಾಗಿ ವಿಚಾರಣೆಗೆ ತೆರಳುತ್ತಿದ್ದೆನೆ’ ಎಂದು ಹೇಳಿದ್ದರು.
ಏನೀದು ಪ್ರಕರಣ:
ಪೊಲೀಸ್ ಇಲಾಖೆಯಲ್ಲಿ ೧೦೦ ಕೋಟಿ ರೂ. ಲಂಚ ವಸೂಲಿ ಹಾಗೂ ಸುಲಿಗೆ ಆರೋಪ ಅನಿಲ್ ದೇಶಮುಖ್ ವಿರುದ್ದವಿದೆ. ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಪರಂಬೀರ್ ಸಿಂಗ್‌ರವರು ಈ ಆರೋಪ ಮಾಡಿದ್ದರು. ಇದೇ ಪ್ರಕರಣದಲ್ಲಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕ್ರಿಮಿನಲ್ ದೂರು ಇವರ ವಿರುದ್ದ ದಾಖಲಾಗಿತ್ತು. ಇದರ ವಿಚಾರಣೆ ನಡೆಯುತ್ತಿದೆ. ಈ ಹಿಂದೆ ಐದು ಬಾರಿ ಸಮನ್ಸ್ ಜಾರಿಯಾಗಿದ್ದರು ಇ.ಡಿ. ವಿಚಾರಣೆಗೆ ಅನಿಲ್ ದೇಶಮುಖ್ ಗೈರು ಹಾಜರಾಗಿದ್ದರು.