ಅಕ್ರಮ ಹಣ ವರ್ಗಾವಣೆ: ಡಿಕೆಶಿ ಸೇರಿ ನಾಲ್ವರಿಗೆ ಜಾಮೀನು

ನವದೆಹಲಿ, ಆ.-ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರ ನಾಲ್ವರಿಗೆ ಜಾಮೀನು ದೊರತಿದೆ.
ಇದರಿಂದಾಗಿ‌ ಡಿ.ಕೆ.ಶಿವಕುಮಾರ್ ಅವರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.
ಶನಿವಾರ ವಿಚಾರಣೆ ನಡೆಸಿದ್ದ ದೆಹಲಿಯ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ಇಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು.
ಪ್ರಕರಣದ ಇತರೆ ಆರೋಪಿಗಳಾದ ಆಂಜನೇಯ ಹನುಮಂತಯ್ಯ, ಸಚಿನ್ ನಾರಾಯಣ, ಸುನಿಲ್ ಶರ್ಮಾ ಮತ್ತು ರಾಜೇಂದ್ರಗೂ ಕೋರ್ಟ್ ಜಾಮೀನು ನೀಡಿ ಆದೇಶ ಹೊರಡಿಸಿತು.
ತಲಾ ಒಂದು ಲಕ್ಷ ಭದ್ರತಾ ಠೇವಣಿ, ಒಬ್ಬರ ಸಾಕ್ಷಿ, ದೇಶ ಬಿಟ್ಟುಹೋಗಬಾರದು ಹಾಗೂ ಸಾಕ್ಷಿ ನಾಶ ಮಾಡಬಾರದು ಎಂಬ ಷರತ್ತು ವಿಧಿಸಿ ಜಾರಿ ನಿರ್ದೇಶನಾಲಯದ ನ್ಯಾಯಾಧೀಶ ವಿಕಾಸ್ ಧುಲ್ ಜಾಮೀನು ಮಂಜೂರು ಮಾಡಿದರು.ಶಿವಕುಮಾರ್‌, ಅವರ ನಿಕಟವರ್ತಿಗಳಾದ ಉದ್ಯಮಿ ಸಚಿನ್‌ ನಾರಾಯಣ್‌, ಶರ್ಮಾ ಟ್ರಾನ್ಸ್‌ಪೋರ್ಟ್‌ ಮಾಲೀಕ ಸುನೀಲ್‌ ಕುಮಾರ್‌ ಶರ್ಮಾ, ದೆಹಲಿಯ ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಎನ್‌. ವಿರುದ್ಧ ವಿಚಾರಣೆ ಆರಂಭಿಸುವಂತೆ ಕೋರಿ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದರು.
ಆರೋಪಟ್ಟಿ ಸಲ್ಲಿಸಿದ ಬಳಿಕ ಹೈಕೋರ್ಟ್‍ನಿಂದ ಪಡೆದ ಮಧ್ಯಂತರ ಜಾಮೀನನ್ನು ಸಾಮಾನ್ಯ ಜಾಮೀನಾಗಿ ಪರಿವರ್ತಿಸಲು ಡಿ.ಕೆ. ಶಿವಕುಮಾರ್ ಮತ್ತು ಹೊಸದಾಗಿ ಜಾಮೀನು ನೀಡುವಂತೆ ಇತರೆ ಆರೋಪಿಗಳು ಕೋರ್ಟ್ ಗೆ ಮನವಿ ಮಾಡಿದ್ದರು.