ಅಕ್ರಮ ಹಣ ಬಿಡುಗಡೆ ಅಧಿಕಾರಿ ವಿರುದ್ಧ ದೂರು


ಬೆಂಗಳೂರು, ನ.೧೪-ನೌಕರ ವೇತನ ಸಂಬಂಧ ಜೇಷ್ಠತೆ ಉಲ್ಲಂಘಿಸಿ ಬರೋಬ್ಬರಿ ೮ ಕೋಟಿ ರೂ.ಗಳನ್ನು ಪಾಲಿಕೆಯ ಪಶ್ಚಿಮ ವಿಭಾಗದ ಹಣಕಾಸು ಉಪ ನಿಯಂತ್ರಕಿ ಕುಸುಮಾ ಕುಮಾರಿ ಬಿಡುಗಡೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಈ ಕುರಿತು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಪಾಲಿಕೆಯ ಹಣಕಾಸು ವಿಶೇಷ ಆಯುಕ್ತರಿಗೆ ದೂರು ಸಲ್ಲಿಸಿದ್ದು, ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಅಧಿಕಾರಿ ಕುಸುಮಾ ಅವರು, ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯಿಂದ ಪಾಲಿಕೆಯ ಪಶ್ಚಿಮ ವಿಭಾಗದ ಹಣಕಾಸು ಉಪ ನಿಯಂತ್ರಕಿ ಆಗಿ ಸೆಪ್ಟೆಂಬರ್ ತಿಂಗಳಲ್ಲಿ ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದಾರೆ.

ಆದರೆ, ಅಕ್ಟೋಬರ್ ತಿಂಗಳಲ್ಲಿ ಪಾಲಿಕೆ ವತಿಯಿಂದ ಪಶ್ಚಿಮ ವಲಯಕ್ಕೆ ೮ ಕೋಟಿ ರೂ.ಗಳ ಅನುದಾನವನ್ನು ಪಡೆದಿರುವ ಅವರು,ಜೇಷ್ಟತೆಯನ್ನು ಉಲ್ಲಂಘಿಸಿ ಕಮಿಷನ್ ಗುತ್ತಿಗೆದಾರರಿಗೆ ಹಣವನ್ನು ಬಿಡುಗಡೆ ಮಾಡಿದ್ದಾರೆ ಎಂದು ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಆರೋಪಿಸಿದ್ದಾರೆ.

ಇನ್ನು, ಪಶ್ಚಿಮ ವಲಯಕ್ಕೆ ಪ್ರಮುಖವಾಗಿ ಬೇಕಾಗಿರುವ ನೌಕರರ ವೇತನ, ಪೆಟ್ರೋಲ್, ಡೀಸೆಲ್ ಬಿಲ್, ಸಹಕಾರ ಸಂಘದ ಕಟಾವಣೆ, ಎಲ್‌ಐಸಿ ಹಾಗೂ ಇನ್ನಿತರೆ ಆರ್ಥಿಕ ಸೌಲಭ್ಯಕ್ಕೆ ಮೀಸಲಿಡದೆ ಒಂದೇ ದಿನದಲ್ಲಿ ೮ ಕೋಟಿ ಮೊತ್ತವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿ
ಕರ್ತವ್ಯಲೋಪವೆಸಗಿರುವುದು ಬೆಳಕಿಗೆ ಬಂದಿವೆ.

ಈ ಹಿಂದೆ ಮುಖ್ಯ ಲೆಕ್ಕಾಧಿಕಾರಿ ಗೋವಿಂದರಾಜ್ ಅವರು ಕೋಟ್ಯಾಂತರ ರೂ ಮೊತ್ತವನ್ನು ಕಾನೂನು ಬಾಹಿರವಾಗಿ ನೀಡಿರುವುದು ಬಹಿರಂಗವಾಗಿತ್ತು.
ಇದರಿಂದ ಪಾಲಿಕೆಯ ಅಧಿಕಾರಿ ನೌಕರರು ಮುಜುಗರಕ್ಕೆ ಒಳಗಾಗಬೇಕಾಯಿತು.

ಈ ಹಿನ್ನಲೆಯಲ್ಲಿ ಕುಸುಮಾ ಕುಮಾರಿ ಅವರು ಪಶ್ಚಿಮ ವಲಯದಲ್ಲಿ ಜೇಷ್ಟತೆಯನ್ನು ಉಲ್ಲಂಘಿಸಿ ಕಮಿಷನ್ ಆಸೆಗೆ ಒಂದೇ ದಿನ ೮ ಕೋಟಿ ರೂಗಳನ್ನು ಬಿಡುಗಡೆ ಮಾಡಿರುವುದರಿಂದ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.