ಅಕ್ರಮ-ಸಕ್ರಮ: ಪಟ್ಟಣದ ಹೇಮಾವತಿ ಬಡಾವಣೆ ನಿವಾಸಿಗಳ ಆಕ್ರೋಶ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.16: ಪಟ್ಟಣದ ಪುರಸಭಾ ವ್ಯಾಪ್ತಿಯ ಹೇಮಾವತಿ ಬಡಾವಣೆ ಮತ್ತು ಟಿ.ಬಿ.ಬಡಾವಣೆಯಲ್ಲಿ ಅಕ್ರಮವಾಗಿ ಹಂಚಿಕೆಯಾಗಿದ್ದ ಎಲ್ಲಾ 1,276 ನಿವೇಶನಗಳನ್ನು ಏಕ ಕಾಲದಲ್ಲಿ ಸಕ್ರಮಗೊಳಿಸುವ ಬದಲು ಕೇವಲ 694 ನಿವೇಶನಗಳನ್ನು ಮಾತ್ರ ಸಕ್ರಮಗೊಳಿಸಿದ ಮಾಜಿ ಸಚಿವ ನಾರಾಯಣಗೌಡರ ಕ್ರಮ ಸರಿಯಲ್ಲ ಎಂದು ಹೇಮಾವತಿ ಬಡಾವಣೆಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
1995 ರಿಂದ ವಿವಿಧ ಹಂತಗಳಲ್ಲಿ ಹಂಚಿಕೆಯಾದ ಎಲ್ಲಾ ನಿವೇಶನಗಳೂ ನಿಯಮಾವಳಿಗೆ ವಿರುದ್ದವಾಗಿಯೇ ಹಂಚಿಕೆಯಾಗಿವೆ. ಆದರೆ ರಾಜಕೀಯ ಕಾರಣಕ್ಕಾಗಿ ಅಕ್ರಮ-ಸಕ್ರಮ ನಿವೇಶನಗಳ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎನ್ನುತ್ತಾರೆ ಸದರಿ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ದೂರು ನೀಡಿದ್ದ ಅಂದಿನ ಪಟ್ಟಣ ಪಂಚಾಯತಿ ಸದಸ್ಯ ಹಾಗೂ ಹಾಲಿ ಪುರಸಭಾ ಸದಸ್ಯ ಕೆ.ಸಿ.ಮಂಜುನಾಥ್. 1995 ರ ಅವಧಿಯಲ್ಲಿ ನಿವೇಶನಗಳ ಹಂಚಿಕೆ ಮಾಡಿದ್ದವರು ಅಂದಿನ ಪುರಸಭೆಯ ಅಧ್ಯಕ್ಷರಾಗಿದ್ದ ದಿವಂಗತ ಕೆ.ಎನ್.ಕೆಂಗೇಗೌಡರು. ಇವರು ಬಿಜೆಪಿ ಪಕ್ಷದವರು.
ಇವರ ಪುತ್ರ ಕೆ.ಶ್ರೀನಿವಾಸ್ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಕ್ಷೇತ್ರದ ಶಾಸಕ ಕೆ.ಸಿ.ನಾರಾಯಣಗೌಡರ ಆಪ್ತರಾಗಿದ್ದು ಮಂಡ್ಯ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರು. ದಿ.ಕೆಂಗೇಗೌಡರನ್ನು ಹೊರತು ಪಡಿಸಿ ನಿವೇಶನ ಹಂಚಿಕೆ ಮಾಡಿರುವ ಉಳಿದೆಲ್ಲಾ ಅಧ್ಯಕ್ಷರುಗಳೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಕೆಂಗೇಗೌಡರು ಮಾತ್ರ ಪ್ರಾಮಾಣಿಕರು ಉಳಿದವರೆಲ್ಲಾ ಅಪ್ರಾಮಾಣಿಕರೆಂದು ಬಿಂಬಿಸಲು ಹಿಂದಿನ ಬಿಜೆಪಿ ಸರ್ಕಾರದ ಅಂದಿನ ಸಚಿವರು ಅಕ್ರಮ ಹಂಚಿಕೆಯಾಗಿದ್ದ ಎಲ್ಲಾ 1,276 ನಿವೇಶನಗಳನ್ನು ಏಕಕಾಲದಲ್ಲಿ ಸಕ್ರಮಗೊಳಿಸುವ ಬದಲು ಕೇವಲ 694 ನಿವೇಶನಗಳನ್ನು ಮಾತ್ರ ಸಕ್ರಮಗೊಳಿಸಲು ಕ್ರಮವಹಿಸಿದ್ದಾರೆ. ರಾಜ್ಯ ಸರ್ಕಾರ ತಕ್ಷಣವೇ ಕ್ರಮವಹಿಸಿ ಉಳಿದ 582 ನಿವೇಶನಗಳ ಸಕ್ರಮಕ್ಕೆ ಮುಂದಾಗಬೇಕು. ಇದರಿಂದ ಪುರಸಭೆಯ ಆದಾಯದಲ್ಲೂ ಹೆಚ್ಚಳಿಕೆಯಾಗಲಿದೆ ಎಂದು ಕೆ.ಸಿ.ಮಂಜುನಾಥ್ ಒತ್ತಾಯಿಸಿದ್ದಾರೆ.
ಹೇಮಾವತಿ ಬಡಾವಣೆ ಮತ್ತು ಟಿ.ಬಿ.ಬಡಾವಣೆಯ 582 ನಿವೇಶನದಾರರು ಅಕ್ರಮ-ಸಕ್ರಮಕ್ಕಾಗಿ ಕಳೆದ 35 ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದು ರಾಜ್ಯ ಸರ್ಕಾರ ತಕ್ಷಣವೇ ಕ್ರಮವಹಿಸಿ ಉಳಿದ 582 ನಿವೇಶನಗಳ ಸಕ್ರಮಕ್ಕೆ ಮುಂದಾಗಬೇಕು.
ಇದರಿಂದ ಪುರಸಭೆಯ ಆದಾಯದಲ್ಲೂ ಹೆಚ್ಚಳಿಕೆಯಾಗಲಿದೆ. 582 ನಿವೇಶನದಾರರಿಗೆ ವಿವಿಧ ಕಾಲಘಟ್ಟದಲ್ಲಿ ಪುರಸಭೆಯ ಅಧ್ಯಕ್ಷರುಗಳು ಪುರಸಭೆಯ ಸಭೆಗಳಲ್ಲಿ ನಿರ್ಣಯಿಸಿ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ನಿವೇಶನ ಪಡೆದವರು ಪುರಸಭೆ ನಿಗಧಿ ಪಡಿಸಿದ ಹಣವನ್ನು ತಮ್ಮ ತಮ್ಮ ನಿವೇಶನಗಳಿಗೆ ಸಂದಾಯ ಮಾಡಿದ್ದಾರೆ. 582 ನಿವೇಶನದಾರರಲ್ಲಿ ಸೇ.95 ರಷ್ಟು ಮಂದಿ ಸಾಲಸೋಲ ಮಾಡಿ ತಮ್ಮ ಕನಸಿನ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಪುರಸಭೆ ಮತ್ತು ವಿದ್ಯುತ್ ಇಲಾಖೆ ಹೇಮಾವತಿ ಬಡಾವಣೆಯ ಜನರಿಗೆ ಅಗತ್ಯವಾದ ರಸ್ತೆ, ನೀರು, ಒಳಚರಂಡಿ ವ್ಯವಸ್ಥೆ ಮತ್ತು ವಿದ್ಯುತ್ ಸೇರಿದಂತೆ ಎಲ್ಲಾ ಬಗೆಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ.
ಪುರಸಭೆ ಎಲ್ಲಾ ಬಗೆಯ ನಾಗರೀಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದರೂ ಬಡಾವಣೆಯಲ್ಲಿರುವ ನಿವೆಶನಗಳು ಅಕ್ರಮ-ಸಕ್ರಮವಾಗದ ಪರಿಣಾಮ ಪುರಸಭೆಗೆ ಮನೆಗಂದಾಯ, ನೀರಿನ ತೆರಿಗೆ ಸೇರಿದಂತೆ ಯಾವುದೇ ಆದಾಯ ಬರದೆ ಆರ್ಥಿಕ ನಷ್ಠಕ್ಕೆ ಒಳಗಾಗುತ್ತಿದೆ.