ಅಕ್ರಮ ವಲಸಿಗರ ಸೆರೆ

ಬೆಂಗಳೂರು,ನ.೮-ನಗರದ ಹಲವೆಡೆ ದೊಡ್ಡ ಮಟ್ಟದಲ್ಲಿ ವಾಸಿಸುತ್ತಿರುವ ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ೮ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ನಗರದಲ್ಲಿ ಅಕ್ರಮವಾಗಿ ಬಾಂಗ್ಲಾ ವಲಸಿಗರು ನೆಲೆ ಕಂಡುಕೊಳ್ಳ ತೊಡಗಿದ್ದು ಅವರಿಗೆ ಬೇಕಾದ ದಾಖಲೆಗಳನ್ನು ಒದಗಿಸಲು ಕೆಲವರು ಸಹಾಯ ಮಾಡುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಎನ್‌ಐಎ ಅಧಿಕಾರಿಗಳು ದಾಳಿ ಕೈಗೊಂಡಿದ್ದಾರೆ.
ನಗರದ ೧೫ಕ್ಕೂ ಹೆಚ್ಚು ಕಡೆಗಳಲ್ಲಿ ಎನ್‌ಐಎ ಅಧಿಕಾರಿಗಳು ತಡರಾತ್ರಿ ದಾಳಿ ಮಾಡಿ ಎಂಟು ಮಂದಿ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಕ್ರಮ ಬಾಂಗ್ಲಾ ವಲಸಿಗರು ಮಾನವ ಕಳ್ಳಸಾಗಾಣಿಕೆ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಂಬಂಧ ಎನ್ ಐಎ ವಿಶೇಷ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆಧಾರದ ಮೇಲೆ ೧೫ ತಂಡಗಳಿಂದ ಏಕಕಾಲಕ್ಕೆ ದಾಳಿ ನಡೆದಿದೆ. ಸೋಲದೇವನಹಳ್ಳಿ, ಕೆಆರ್ ಪುರಂ, ಬೆಳ್ಳಂದೂರು ಸೇರಿದಂತೆ ೧೫ಕ್ಕೂ ಅಧಿಕ ಕಡೆ ಎಕಕಾಲದಲ್ಲಿ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಬಾಂಗ್ಲಾ ದೇಶದಿಂದ ನೂರಾರು ಮಂದಿಯನ್ನು ಭಾರತಕ್ಕೆ ಅಕ್ರಮವಾಗಿ ಕರೆ ತರುವುದು, ಇಲ್ಲಿ ಅವರನ್ನು ಉಗ್ರಗಾಮಿ ಚಟುವಟಿಕೆಗಳಿಗೆ ಬಳಸುವುದು ಇವರ ಮೇಲಿನ ಪ್ರಧಾನ ಆರೋಪವಾಗಿದೆ. ಉದ್ಯೋಗದ ಆಮಿಷ ಒಡ್ಡಿ ಅವರನ್ನು ಇಲ್ಲಿಗೆ ಕರೆತಂದು ಬಳಿಕ ಅವರಿಗೆ ಉಗ್ರ ತರಬೇತಿ ನೀಡಿ ದುಷ್ಕೃತ್ಯಗಳಿಗೆ ಬಳಸುವ ವಿದ್ಯಮಾನಗಳು ನಡೆಯುತ್ತಿರುವ ಬಗ್ಗೆ ದೂರುಗಳು ದಾಖಲಾಗಿದ್ದವು.
ನಾನಾ ಭಾಗಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇರುವ ಬಗ್ಗೆ ಕಾಲ ಕಾಲಕ್ಕೆ ವರದಿಗಳು ಬರುತ್ತಲೇ ಇವೆ. ಆದರೆ, ರಾಜಕಾರಣಿಗಳು ಕೂಡಾ ಇವರನ್ನು ಮತ ಬ್ಯಾಂಕ್ ಆಗಿ ಬಳಸುತ್ತಿರುವುದರಿಂದ ಅದರ ಬಗ್ಗೆ ಯಾರೂ ಹೆಚ್ಚಿನ ಗಮನ ನೀಡುತ್ತಿಲ್ಲ. ಅವರಲ್ಲಿ ಕೆಲವರು ಅಪಾಯಕಾರಿ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಮಾಹಿತಿ ಇದೆ. ಕೆಲವರು ಕಳ್ಳತನ, ದರೋಡೆ ಕೃತ್ಯಗಳಲ್ಲಿ ಶಾಮೀಲಾದರೆ ಇನ್ನು ಕೆಲವರು ಕೊಲೆ, ಉಗ್ರ ಕೃತ್ಯಗಳಲ್ಲೂ ಭಾಗಿಯಾಗುತ್ತಿದ್ದಾರೆ.
ರಾಮನಗರ ಮತ್ತಿತರ ಪ್ರದೇಶಗಳಲ್ಲಿ ಅವರು ತಮ್ಮದೇ ಆದ ಕಾಲೊನಿಗಳನ್ನು ಸೃಷ್ಟಿಸಿಕೊಂಡು ರಕ್ಷಣೆ ಪಡೆಯುತ್ತಿದ್ದಾರೆ ಎಂಬ ಬಗ್ಗೆ ಗಂಭೀರವಾದ ಆರೋಪಗಳು ಕೇಳಿಬಂದಿದ್ದವು. ಆದರೆ, ಎಲ್ಲವೂ ಒಂದು ಹಂತದಲ್ಲಿ ದೊಡ್ಡ ಸುದ್ದಿಯಾಗಿ ಬಳಿಕ ತಣ್ಣಗಾಗುವುದರಿಂದ ಅವರು ಮತ್ತೆ ಮತ್ತೆ ಚಿಗುರುತ್ತಿದ್ದಾರೆ.

೮ ರಾಜ್ಯಗಳಲ್ಲಿ ದಾಳಿ ಓರ್ವನ ಬಂಧನ
ಕರ್ನಾಟಕ ಸೇರಿದಂತೆ ದೇಶದಾದ್ಯಂತ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಳಿ ಜಮ್ಮುವಿನಲ್ಲಿ ಓರ್ವ ಮ್ಯಾನ್ಮಾರ್ ಪ್ರಜೆಯನ್ನು ಬಂಧಿಸಿದೆ.
ಮಾನವ ಕಳ್ಳಸಾಗಾಣೆಕೆ ದಂಧೆಯಲ್ಲಿ ತೊಡಗಿರುವ ಗ್ಗೆ ಮಾಹಿತಿಗಳು ಬಂದ ಹಿನ್ನೆಲೆಯಲ್ಲಿ ತಮಿಳುನಾಡು, ತ್ರಿಪುರ, ಪಶ್ಚಿಮ ಬಂಗಾಳ, ತೆಲಂಗಾಣ, ಅಸ್ಸಾಂ, ಹರಿಯಾಣ, ರಾಜಸ್ತಾನ, ಕೇಂದ್ರ ಆಡಳಿತ ಪ್ರದೇಶಗಳಾದ ಜಮ್ಮು -ಕಾಶ್ಮೀರ ಹಾಗೂ ಪುದುಚೇರಿಗಳಲ್ಲೂ ಎನ್‌ಐಎ ಕಾರ್ಯಾಚರಣೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು- ಕಾಶ್ಮೀರದಲ್ಲಿ ರೋಹಿಂಗ್ಯಾ ಮುಸ್ಲೀ ವ್ಯಕ್ತಿಯೊಬ್ಬನನ್ನು ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಎನ್‌ಐಎ ವಕ್ತಾರರು ಮಾಹಿತಿ ನೀಡಿದ್ದಾರೆ.
ಬಂಧಿತ ವ್ಯಕ್ತಿ ಜಾಫರ್ ಅಲಾಂ ಜಮ್ಮುವಿನ ಬಂತಿಂಡಿ ಪ್ರದೇಶದ ನಿವಾಸದಲ್ಲಿ ತಡರಾತ್ರಿ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.
ಮಾನವ ಕಳ್ಳ ಸಾಗಾಣಿಕೆ ಹಾಗೂ ಪಾಸ್‌ಪೋರ್ಟ್ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾನ್ಮಾರ್ ವಲಸಿಗರ ವಾಸಿಸುವ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಈ ಮೂಲಗಳು ತಿಳಿಸಿವೆ.