ಅಕ್ರಮ ವಲಸಿಗರಿಗೆ ಹಡಗಿನಲ್ಲಿ ವಾಸ್ತವ್ಯ

ಲಂಡನ್, ಜೂ.೭- ವಿಶ್ವದ ಹಲವು ಕಡೆಗಳಿಂದ ಬ್ರಿಟನ್‌ಗೆ ಆಗಮಿಸುತ್ತಿರುವ ಅಕ್ರಮ ವಲಸಿಗರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಈ ನಡುವೆ ಬ್ರಿಟನ್ ಕರಾವಳಿಗೆ ದೋಣಿಗಳ ಮೂಲಕ ಅಕ್ರಮ ವಲಸಿಗರ ಆಗಮನವನ್ನು ತಡೆಯುವ ತನ್ನ ಯೋಜನೆಯನ್ನು ಬ್ರಿಟನ್ ಪ್ರಧಾನಿ ರಿಶಿ ಸುನಕ್ ಪ್ರಕಟಿಸಿದ್ದಾರೆ.
ಬ್ರಿಟನ್‌ನ ಗಡಿ ಭಾಗದ ಪಟ್ಟಣವಾದ ಕೆಂಟ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನಕ್, ತೆರಿಗೆ ಪಾವತಿದಾರರ ಹಣದಿಂದ ಅಕ್ರಮ ವಲಸಿಗರಿಗೆ ಹೊಟೇಲ್‌ಗಳಲ್ಲಿ ಆಶ್ರಯ ಒದಗಿಸುವ ಬದಲು ಅವರಿಗೆ ಹಡಗುಗಳಲ್ಲಿ ವಾಸ್ತವ್ಯಕ್ಕೆ ಏರ್ಪಾಡು ಮಾಡಲಾಗುವುದು. ಅಕ್ರಮ ವಲಸಿಗರಿಗೆ ವಾಸ್ತವ್ಯಕ್ಕಾಗಿ ಮೊದಲ ಹಡಗೊಂದು ತಿಂಗಳಾಂತ್ಯದಲ್ಲಿ ಸಿದ್ಧವಾಗಲಿದೆ. ಅದರಲ್ಲಿ ೧ ಸಾವಿರಕ್ಕೂ ಅಧಿಕ ವಲಸಿಗರಿಗೆ ಶೀಘ್ರದಲ್ಲೇ ಅದರಲ್ಲಿ ಆಶ್ರಯ ಒದಗಿಸಲಿದ್ದೇವೆ. ಬ್ರಿಟನ್ ಸಂಸತ್‌ನ ಕೆಳಮನೆ (ಹೌಸ್ ಆಫ್ ಕಾಮನ್ಸ್)ಯಲ್ಲಿ ಅಕ್ರಮ ವಲಸಿಗರ ವಿಧೇಯಕವು ಅಂಗೀಕಾರಗೊಂಡಿದೆ. ದೇಶವನ್ನು ಅಕ್ರಮವಾಗಿ ಪ್ರವೇಶಿಸುವವರನ್ನು ಬಂಧಿಸಲು ಹಾಗೂ ಗಡಿಪಾರು ಮಾಡುವ ಹಕ್ಕನ್ನು ಈ ವಿಧೇಯಕವು ಸರಕಾರಕ್ಕೆ ನೀಡುತ್ತದೆ. ಅಕ್ರಮ ವಲಸಿಗರನ್ನು ಹೊಟೇಲ್‌ಗಳಿಂದ ಹೊರತಂದು, ಅವರನ್ನು ಸೇನಾ ಸೌಕರ್ಯಗಳು ಸೇರಿದಂತೆ ಇತರ ಪರ್ಯಾಯ ಸ್ಥಳಗಳಿಗೆ ವರ್ಗಾಯಿಸಲಿದ್ದೇವೆ. ಬಿಬ್ಬಿ ಸ್ಟಾಕ್ಹೋಮ್ ಆಕ್ರಮ ವಲಸಿಗರಿಗೆ ಆಶ್ರಯ ನೀಡಲಿರುವ ಮೊದಲ ಹಡಗಾಗಿದ್ದು ಅದು ಪೋರ್ಟ್‌ಲ್ಯಾಂಡ್‌ನಲ್ಲಿ ಲಂಗರು ಹಾಕಲಿದೆ. ೨೦೦ ಹಾಸಿಗೆಗಳು, ಮೂರು ಮಹಡಿಗಳಿರುವ ಈ ಹಡಗಿನಲ್ಲಿ ಸುಮಾರು ೫೦೦ ವಲಸಿಗರಿಗೆ ಆಶ್ರಯ ನೀಡಬಹುದಾಗಿದೆ ಎಂದು ಸುನಕ್ ಹೇಳಿದರು. ಸುರಕ್ಷಿತ ರಾಷ್ಟ್ರಗಳಿಂದ ವಲಸೆ ಬರುವ ಜನರಿಂದಾಗಿಯೇ ಬ್ರಿಟನ್‌ನ ವಲಸಿಗರಿಗೆ ಆಶ್ರಯ ವ್ಯವಸ್ಥೆ ತುಂಬಿತುಳುಕುತ್ತಿದೆ. ಇದರಿಂದಾಗಿ ನಿಜಕ್ಕೂ ಆಶ್ರಯದ ಅತ್ಯಂತ ಅಗತ್ಯವಿರುವವರಿಗೆ ನೆರವಾಗುವ ಸರಕಾರದ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತಿದೆ. ಅಕ್ರಮ ವಲಸಿಗರ ವಸತಿಗಾಗಿ ಸರಕಾರವು ದಿನಕ್ಕೆ ೬ ಲಕ್ಷ ಡಾಲರ್‌ನಷ್ಟು ತೆರಿಗೆ ಪಾವತಿದಾರರ ಹಣವನ್ನು ಖರ್ಚು ಮಾಡುತ್ತಿದೆಯೆಂದು ಸುನಕ್ ಹೇಳಿದರು.