ಅಕ್ರಮ ಮಾರಾಟ ಜಾಲ: ೪೦೦ ಪ್ರಾಣಿಗಳ ರಕ್ಷಣೆ

ಮ್ಯಾಡ್ರಿಡ್ (ಸ್ಪೇನ್), ಅ.೧೯- ಸ್ಪೇನ್‌ನಲ್ಲಿ ನಡೆಯುತ್ತಿದ್ದ ಭಾರೀ ಪ್ರಮಾಣದ ಪ್ರಾಣಿಗಳ ಅಕ್ರಮ ಕಳ್ಳಸಾಗಾಟ ಪ್ರಕರಣವನ್ನು ಪೊಲೀಸ್ ಇಲಾಖೆ ಪತ್ತೆಹಚ್ಚಿದ್ದು, ಸುಮಾರು ೪೦೦ಕ್ಕೂ ಹೆಚ್ಚು ಪ್ರಾಣಿಗಳನ್ನು ರಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಣಿ ಹಿಂಸೆ, ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣ ಸೇರಿದಂತೆ ಒಟ್ಟು ೧೩ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳ್ಳಸಾಗಾಟ ಗ್ಯಾಂಗ್‌ನವರು ಪೂರ್ವ ಯುರೋಪ್‌ನಿಂದ ಅಂಡೋರಾ ಮೂಲಕ ಪ್ರಾಣಿಗಳನ್ನು ಅಕ್ರಮವಾಗಿ ಸ್ಪೇನ್‌ಗೆ ಆಮದು ಮಾಡಿಕೊಳ್ಳುತ್ತಿದ್ದರು ಎಂದು ಶಂಕಿಸಲಾಗಿದೆ. ಈ ವೇಳೆ ಹೆಚ್ಚಿನ ಪ್ರಾಣಿಗಳ ಆರೋಗ್ಯ ಸ್ಥಿತಿ ಉತ್ತಮವಾಗಿರದಿದ್ದರೂ ಅವುಗಳ ಸಾಗಾಟಕ್ಕೆ ಉತ್ತಮ ಸ್ಥಿತಿಯಲ್ಲಿವೆ ಎಂಬ ನಕಲಿ ಪ್ರಮಾಣಪತ್ರವನ್ನು ಕೂಡ ತಯಾರಿಸಲಾಗಿತ್ತು ಎಂಬುದು ತಿಳಿದು ಬಂದಿದೆ. ಅನಾರೋಗ್ಯದಲ್ಲಿರುವ ಕೆಲವು ಪ್ರಾಣಿಗಳನ್ನು ಸದ್ಯ ವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಸ್ಪೇನ್‌ನ ಬಾರ್ಸೆಲೊನಾದಲ್ಲಿರುವ ಹಲವು ಸಾಕುಪ್ರಾಣಿಗಳ ಮಾರಾಟ ಶಾಪ್‌ಗಳಲ್ಲಿ ಅನಾರೋಗ್ಯ ಪೀಡಿತ ಪ್ರಾಣಿಗಳನ್ನು ಮಾರಾಟ ಮಾಡಲಾಗುತ್ತಿರುವ ಬಗ್ಗೆ ನಾಗರಿಕರಿಂದ ಹಲವು ದೂರುಗಳು ಬಂದಿದ್ದವು. ಅಲ್ಲಿ ಬಳಿಕ ೩೩ ಅನಾರೋಗ್ಯ ಪೀಡಿತ ನಾಯಿಗಳು ಕಂಡುಬಂದಿದ್ದವು. ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಪ್ರಾಣಿಗಳ ತಳಿಗಳನ್ನು ಅಕ್ರಮವಾಗಿ ಆನ್‌ಲೈನ್‌ನಲ್ಲಿ ಖರೀದಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಅಲ್ಲದೆ ಇತರೆ ಪ್ರಾಣಿಗಳನ್ನು ಬಂಧಿತರಾಗಿರುವ ಶಂಕಿತರು ತಮ್ಮ ಕೇಂದ್ರಗಳಲ್ಲಿ ಅಕ್ರಮವಾಗಿ ಬೆಳೆಸುತ್ತಿದ್ದರು. ಅಲ್ಲಿ ಹೆಣ್ಣು ಪ್ರಾಣಿಗಳನ್ನು ತಮ್ಮ ಆರೋಗ್ಯದ ಬಗ್ಗೆ ಕಾಳಜಿಯಿಲ್ಲದೆ ಸಾಧ್ಯವಾದಷ್ಟು ಸಂತತಿಯನ್ನು ಉತ್ಪಾದಿಸಲು ಬಳಸಲಾಗುತ್ತಿತ್ತು ಎನ್ನಲಾಗಿದೆ. ಇನ್ನು ವಶಪಡಿಸಿಕೊಂಡಿರುವ ೪೦೦ ಪ್ರಾಣಿಗಳ ಪೈಕಿ ಹೆಚ್ಚಿನವು ಬೆಕ್ಕು ಹಾಗೂ ನಾಯಿಗಳಾಗಿವೆ.