ಅಕ್ರಮ ಮಾರಕಾಸ್ತ್ರಗಳನ್ನು ಮಾರಲು ಹೊರಟಿದ್ದ ವ್ಯಕ್ತಿಯ ಬಂಧನ

ಕಲಬುರಗಿ:ನ.18- ಅಕ್ರಮವಾಗಿ ಮಾರಕಾಸ್ತ್ರಗಳನ್ನು ಮಾರಾಟ ಮಾಡಲು ಹೊರಟಿದ್ದ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ ಘಟನೆ ನಗರದ ರೋಜಾ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪಾಯನ್ ಪ್ರದೇಶದಲ್ಲಿನ ಸೇತುವೆಯ ಹತ್ತಿರ ವರದಿಯಾಗಿದೆ.
ಬಂಧಿತನಿಗೆ ನಗರದ ಹಾಗರಗಾ ಕ್ರಾಸ್‍ನ ಜುಬೇರ್ ಕಾಲೋನಿಯ ವ್ಯಾಪಾರಿ ಮೊಹ್ಮದ್ ರಿಜವಾನ್ ತಂದೆ ಶಮಶುಜಮಾಖಾನ್ (40) ಎಂದು ಗುರುತಿಸಲಾಗಿದೆ. ಬಂಧಿತನಿಂದ ಎರಡಿ ರಾಡ್ ಚಾಕುಗಳು, ಒಂದು ಇಗಲ್ ಚಾಕು, ಒಂದು ಪರ್ದಾ ಚಾಕು, ಒಂದು ಕುಕ್ರಿ ಚಾಕು, ಒಂದು ಪಂಚ್, ಮೂರು ಬಟನ್ ಚಾಕುಗಳು, 8 ನೇಪಾಳಿ ಚಾಕುಗಳು, ಒಂದು ಸ್ಟೀಕ್ ಚಾಕು, ಒಂದು ಆಟಿಕೆಯ ರಿವಾಲ್ವರ್ ಮುಂತಾದವುಗಳನ್ನು ಪೋಲಿಸರು ವಶಪಡಿಸಿಕೊಂಡರು.
ಬಾಂಬೆ ಸಿರಾಜ್ ಹತ್ತಿರ ಮಾರಕಾಸ್ತ್ರಗಳನ್ನು ಖರೀದಿ ಮಾಡಿರುವುದಾಗಿ ಬಂಧಿತ ಆರೋಪಿಯು ಪೋಲಿಸರ ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದಾನೆ. ಖಚಿತ ಭಾತ್ಮಿ ಮೇರೆಗೆ ಪಿಐ ಅಸ್ಲಂ ಭಾಷಾ, ಪಿಎಸ್‍ಐ ವಾಹಿದ್ ಕೋತ್ವಾಲ್, ಎಎಸ್‍ಐ ನಿಜಲಿಂಗಪ್ಪ, ಸಿಬ್ಬಂದಿಯವರಾದ ರಫಿಯುದ್ದೀನ್, ಈರಣ್ಣ, ರಾಜಕುಮಾರ್, ಶಿವಾನಂದ್ ಮುಂತಾದವರು ಕಾರ್ಯಾಚರಣೆ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಇಬ್ಬರು ಆರೋಪಿಗಳ ವಿರುದ್ಧ ರೋಜಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.