ಅಕ್ರಮ ಮರಳು ಸಾಗಾಣೆ: ಆರೋಪಿಗೆ ಜೈಲು ಶಿಕ್ಷೆ

ಕಲಬುರಗಿ,ಜ.13-ಶಹಾಪುರ ತಾಲ್ಲೂಕಿನ ಹೈಯಾಳ (ಬಿ) ಗ್ರಾಮ ಸೀಮಾಂತರದ ಕೃಷ್ಣಾ ನದಿಯಿಂದ ಟ್ರ್ಯಾಕ್ಟರ್ ನಲ್ಲಿ ಅಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿದ್ದ ಆರೋಪಿಗೆ ಶಹಾಪುರದ ಹೆಚ್ಚುವರಿ ಜೆ.ಎಂ.ಎಫ್.ಸಿ.ನ್ಯಾಯಾಲಯ 6 ತಿಂಗಳ ಸಾದಾ ಶಿಕ್ಷೆ ಹಾಗೂ 10 ಸಾವಿರ ರೂ.ದಂಡ ವಿಧಿಸಿದೆ.
ಶಹಾಪುರ ತಾಲ್ಲೂಕಿನ ಗೋಗಿ (ಕೆ) ಗ್ರಾಮದ ನಿಂಗಪ್ಪ ತಂದೆ ಹಣಮಂತ ಶಿಕ್ಷೆಗೆ ಗುರಿಯಾದ ಆರೋಪಿ.
10.3.2017 ರಂದು ಸಂಜೆ 7 ಗಂಟೆ ಸುಮಾರಿಗೆ ಆರೋಪಿ ಹೈಯಾಳ (ಬಿ) ಗ್ರಾಮ ಸೀಮಾಂತರದ ಕೃಷ್ಣಾನದಿಯಿಂದ ಟ್ರ್ಯಾಕ್ಟರ್ ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾಗ ಗೋಗಿ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣಾ ಸುಬೇದಾರ ಅವರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಮುಖ್ಯಪೇದೆ ಮಲ್ಲಣ್ಣ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜೆ.ಎಂ.ಎಫ್.ಸಿ.ನ್ಯಾಯಾಲಯದ ನ್ಯಾಯಾಧೀಶ ಕಾಡಪ್ಪ ಹುಕೇರಿ ಅವರು ಆರೋಪಿಗೆ 6 ತಿಂಗಳ ಸಾದಾ ಶಿಕ್ಷೆ ಹಾಗೂ 10 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ವಿನಾಯಕ ಕೋಡ್ಲಾ ವಾದ ಮಂಡಿಸಿದ್ದರು.