ಅಕ್ರಮ ಮರಳು ಸಾಗಾಣಿಕೆ: ಕ್ರಮಕ್ಕೆ ಆಗ್ರಹ

ರಾಯಚೂರು.ನ.೮-ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯಲ್ಲಿ ನಡೆಯುವ ಅಕ್ರಮ ಮರಳು ಸಾಗಾಣಿಕೆ, ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳಿಗೆ ಕೂಡಲೇ ಕಡಿವಾಣ ಹಾಕಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಮುಖಂಡರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ದೇವದುರ್ಗ ತಾಲೂಕಿನ ಗಬ್ಬೂರು ೪೦ ಹಳ್ಳಿಗಳನ್ನೊಳಗೊಂಡ ಗಬ್ಬೂರು ಬಹುದೊಡ್ಡ ಹೋಬಳಿಯಾಗಿದ್ದು, ಈ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಪಡಿತರ ಚೀಟಿಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಹಾಗೂ ಅಕ್ರಮ ಮರಳು ಸಾಗಾಣಿಕೆ ಮತ್ತು ಜೂಜಾಟ, ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿರುವುದನ್ನು ನೋಡಿದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಆರೋಪಿಸಿದರು.
ಕೃಷ್ಣಾ ನದಿ ತೀರದಿಂದ ರಾತ್ರೋರಾತ್ರಿ ಅಕ್ರಮ ಮರಳು ಸಾಗಾಟ ಜನರ ನಿದ್ದೆಗೆಡಿಸಿ ಓವರ್‌ಲೋಡ್ ಮಾಡಿಕೊಂಡ ಲಾರಿಗಳು ಜನರ ಪ್ರಾಣ ನುಂಗಲು ಒಂದರ ಮೇಲೊಂದರಂತೆ ಹಾತೊರೆಯುತ್ತಿರುವುದು ಜನಸಾಮಾನ್ಯರಲ್ಲಿ ಭಯ ಹುಟ್ಟಿಸಿದೆ. ಈ ಅಕ್ರಮ ಮರಳು ಸಾಗಾಟದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆಂಬ ಅನುಮಾನ ಜನರ ಮನದಲ್ಲಿ ಹೊಗೆಯಾಡುತ್ತಿದೆ ಎಂದರು.
ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ, ಅಕ್ರಮ ಜೂಜಾಟ, ಮದ್ಯಮಾರಾಟ, ಮರಳು ಸಾಗಾಣಿಕೆಯಂತಹ ಚಟುವಟಿಕೆಗಳಿಗೆ ಕೂಡಲೇ ಕಡಿವಾಣ ಹಾಕಬೇಕು, ತಪ್ಪಿತಸ್ಥರ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ನೆಮ್ಮದಿ ನೀಡಬೇಕು. ಒಂದುವೇಳೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗಬ್ಬೂರು ನಾಡ ಕಾರ್ಯಾಲಯದ ಮುಂದೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜಪ್ಪ ಸಿರವಾರಕರ್, ನಾಗರಾಜ ಖಾನಾಪೂರ, ಮರೆಪ್ಪ ಮಲದಕಲ್, ಗುರುಪ್ರತಾಪ್ ಖಾನಾಪೂರ, ಬಸಲಿಂಗಪ್ಪ ಖಾನಾಪೂರ, ಶಾಂತಕುಮಾರ ಹೊನ್ನಟಗಿ, ತುಕಾರಾಮ್ ಗಣೇಕಲ್, ಶರಣಪ್ಪ ನೀಲಗಲ್, ಬಸವಲಿಂಗ ಗಣೇಕಲ್, ಮೌನೇಶ ನೀಲಗಲ್, ಚನ್ನಬಸವ ಅಂಗಡಿ, ಚನ್ನಪ್ಪ ನೀಲಗಲ್ ಸೇರಿದಂತೆ ಅನೇಕರಿದ್ದರು.