ಅಕ್ರಮ ಮರಳು ಸಾಗಣೆ ತಡೆ ವೈಫಲ್ಯ: ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ

ಕಲಬುರಗಿ.ಜೂ.1:ಭೀಮಾ ನದಿಯಲ್ಲಿನ ಅಕ್ರಮ ಮರಳು ಸಾಗಣೆಯ ವಿರುದ್ಧ ಕ್ರಮ ಕೈಗೊಳ್ಳದ ಫರತಾಬಾದ್ ಠಾಣೆಯ ಪೋಲಿಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಂಗಳವಾರ ಭೀಮಾ ನದಿ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ನಗರ ಪೋಲಿಸ್ ಆಯುಕ್ತರ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ನಗರ ಪೋಲಿಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಫರತಾಬಾದ್ ಪೋಲಿಸ್ ಠಾಣೆಗೆ ತಮರಾಯ್ ಪಾಟೀಲ್ ಅವರು ಆರಕ್ಷಕ ನಿರೀಕ್ಷಕರಾಗಿ ಬಂದ ನಂತರ ಠಾಣೆಯ ವ್ಯಾಪ್ತಿಯಲ್ಲಿ ಬರುವ ಫಿರೋಜಾಬಾದ್, ಹಸ್ತಿನಾಪೂರ್, ಸರಡಗಿ, ಹಾಗರಗುಂಡಗಿ, ಅವರಾದ್ (ಕೆ), ಬಸವಪಟ್ಟಣ್, ಬೆಳಗುಂಪಾ(ಕೆ), ಹೇರೂರ್(ಬಿ) ಮುಂತಾದ ಗ್ರಾಮಗಳಲ್ಲಿನ ಭೀಮಾ ನದಿಯಲ್ಲಿನ ಮರಳನ್ನು ಅಕ್ರಮವಾಗಿ ಮಹಾರಾಷ್ಟ್ರದ ಸೊಲ್ಲಾಪೂರಕ್ಕೆ ಸಾಗಿಸಲಾಗುತ್ತಿದೆ. ಈ ಕುರಿತು ದೂರು ಸಲ್ಲಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಫರತಾಬಾದ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ವ್ಯಾಪಕ ಮಟಕಾ, ಜೂಜಾಟ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಕುರಿತು ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಪೋಲಿಸ್ ಠಾಣೆಗೆ ತಮಗೆ ಅನ್ಯಾಯವಾಗಿದೆ ಎಂದು ದೂರು ನೀಡಿದವರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ದೂರಿದರು.
ಫರತಾಬಾದ್ ಪೋಲಿಸ್ ಠಾಣೆಯ ಎಸ್‍ಬಿ ಕರ್ತವ್ಯ ಮಾಡುತ್ತಿದ್ದ ಮುಖ್ಯ ಪೇದೆ ರಘುವೀರಲಾಲ್ ತಿವಾರಿ ಅವರು ಒಂದು ಟ್ರ್ಯಾಕ್ಟರ್‍ಗೆ 2000ರೂ.ಗಳನ್ನು ತೆಗೆದುಕೊಂಡು ರಾತ್ರಿ ಸಮಯದಲ್ಲಿ ಸುಮಾರು 50-60 ಟ್ರ್ಯಾಕ್ಟರ್‍ಗಳು ಅಕ್ರಮ ಮರಳು ಸಾಗಣೆ ಮಾಡಲು ಸ್ವತ: ರಾತ್ರಿ ಸಮಯದಲ್ಲಿ ಅಕ್ರಮ ಮರಳು ಸಾಗಾಣೆಯಾದ ಸ್ಥಳದಲ್ಲಿಯೇ ಇರುತ್ತಾನೆ. ಎಲ್ಲ ಟ್ರ್ಯಾಕ್ಟರ್ ಚಾಲಕರಿಂದ ಹಣ ಪಡೆಯುತ್ತಾನೆ. ಎಲ್ಲ ಗ್ರಾಮಗಳಲ್ಲಿ ಜೂಜಾಟ ನಡೆಯುತ್ತಿದ್ದರೂ ಸಹ ಕ್ರಮ ಕೈಗೊಳ್ಳುವುದಿಲ್ಲ. ಆದ್ದರಿಂದ ಕೂಡಲೇ ಅಮಾನತ್ತಿಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಠಾಣೆಯ ಪೇದೆ ಪ್ರಕಾಶ್ ಅವರು ಸುಮಾರು ವರ್ಷಗಳಿಂದ ರಾತ್ರಿ ಸಮಯದಲ್ಲಿ ಕಾರಿನಲ್ಲಿ ಬಂದು ಅಕ್ರಮ ಮರಳು ಸಾಗಣೆ ಮಾಡಲು ಅವರೇ ಸ್ವತ: 10 ಟಿಪ್ಪರ್‍ಗಳನ್ನು ತಂದು ತುಂಬುವುದಕ್ಕೆ ಜೆಸಿಪಿ ತಂದು ಭೀಮಾ ನದಿಯಲ್ಲಿನ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದಾರೆ. ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿಯವರೆಗೂ ಸುಮಾರು ಐದು ಕೋಟಿ ರೂ.ಗಳಿಗೂ ಹೆಚ್ಚಿನ ಅಕ್ರಮ ಮರಳು ಸಾಗಣೆ ಮಾಡಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಫರತಾಬಾದ್ ಪೋಲಿಸ್ ಠಾಣೆಯಲ್ಲಿ ಕಳೆದ 2021ರ ಮಾರ್ಚ್ 21ರಂದು ಅಕ್ರಮ ಮರಳು ಸಾಗಣೆಯ ಕುರಿತು ಪ್ರಕರಣ ದಾಖಲಾದರೂ ಸಹ ಆರೋಪಿಗಳನ್ನು ಇಲ್ಲಿಯವರೆಗೂ ಬಂಧಿಸಿಲ್ಲ. ಅಕ್ರಮ ಮರಳು ಸಾಗಣೆಯ ಕೆಲವು ವ್ಯಕ್ತಿಗಳೊಂದಿಗೆ ಆರಕ್ಷಕ ನಿರೀಕ್ಷಕ ತಮರಾಯ್ ಪಾಟೀಲ್ ಅವರು ದೂರವಾಣಿ ಮೂಲಕ ಸಂಪರ್ಕದಲ್ಲಿದ್ದಾರೆ. ಆ ಕುರಿತು ತನಿಖೆ ಮಾಡಿದಲ್ಲಿ ಸತ್ಯ ಸಂಗತಿ ಹೊರಬರುತ್ತದೆ. ತನಿಖೆ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಹಾಗರಗುಂಡಗಿಯ ಶಿವಾನಂದ್ ಮಹಾಸ್ವಾಮೀಜಿ, ಕವಲಗಾ(ಕೆ)ಯ ಅಭಿನವ ಕಣ್ಣೂರ್, ಕವಲಗಾ(ಬಿ)ಯ ಸಿದ್ದವೀರ್ ದೇವರು, ಭೀಮಶಾ ಖನ್ನಾ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.