ಅಕ್ರಮ ಮರಳು ಸಾಗಣೆ ತಡೆಗೆ ಆಗ್ರಹ

ಬೀದರ್:ನ.6: ಔರಾದ್ ತಾಲ್ಲೂಕಿನಲ್ಲಿ ನೆರೆ ರಾಜ್ಯಗಳ ಅಕ್ರಮ ಮರಳು ಸಾಗಣೆ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಾಮಾಜಿಕ ನ್ಯಾಯಕ್ಕಾಗಿ) ಆಗ್ರಹಿಸಿದೆ.

ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ತಾಲ್ಲೂಕಿನ ಚಿಂತಾಕಿ-ಔರಾದ್, ಕರಂಜಿ-ನಾಗಮಾರಪಳ್ಳಿ, ಮುರ್ಕಿ-ಔರಾದ್, ಜಮಗಿ-ವಡಗಾಂವ್- ಸಂತಪುರ, ವನಮಾರಪಳ್ಳಿ ಮಾರ್ಗಗಳಲ್ಲಿ ನಿರಂತರವಾಗಿ ಅಕ್ರಮ ಮರಳು ಸಾಗಣೆ ಮಾಡಲಾಗುತ್ತಿದೆ ಎಂದು ದೂರಿದರು.

ಕೆಲ ಪ್ರಭಾವಿ ವ್ಯಕ್ತಿಗಳು ನಿಯಮ ಉಲ್ಲಂಘಿಸಿ, ವಾಹನಗಳಲ್ಲಿ ಸಾಮಥ್ರ್ಯಕ್ಕೂ ಅಧಿಕ ಮರಳು ಸಾಗಣೆ ಮಾಡುತ್ತಿದ್ದಾರೆ. ಇದರಿಂದಾಗಿ ರಸ್ತೆಗಳು ಹಾಳಾಗುತ್ತಿವೆ. ರಸ್ತೆಗಳ ಮಧ್ಯೆ ಭಾರಿ ಗಾತ್ರದ ತಗ್ಗು ದಿನ್ನೆಗಳು ನಿರ್ಮಾಣಗೊಳ್ಳುತ್ತಿವೆ ಎಂದು ಹೇಳಿದರು.

ಅಕ್ರಮ ಮರಳು ಸಾಗಣೆ ತಡೆದು, ರಸ್ತೆಗಳನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಜಿಲ್ಲಾ ಅಧ್ಯಕ್ಷ ಸತೀಶ ವಗ್ಗೆ, ಸಾಯಿ ಸಿಂಧೆ, ಸಂಗಮೇಶ ಬಾವಿದೊಡ್ಡಿ, ಅಶೋಕ ವಗ್ಗೆ, ಬಸವರಾಜ ಹೊಸಮನಿ, ಮಹೇಶ ಕೌಡಗಾಂವ್ ಇದ್ದರು.