ಅಕ್ರಮ ಮರಳು ಮಾರಾಟ- ಪಿಎಸ್‌ಐ ಸಾಥ್ ಆರೋಪ

ಗಬ್ಬೂರು.ನ.೬-ಅಕ್ರಮ ಮರಳು ಮಾರಾಟಕ್ಕೆ ಗಬ್ಬೂರು ಪಿಎಸ್‌ಐ ಸಣ್ಣ ಈರೇಶ ಅವರು ರಾಜರೋಷವಾಗಿ ಸಾಥ್ ನೀಡುತ್ತಿದ್ದಾರೆಂದು ದೇವದುರ್ಗ ತಾಲೂಕ ಘಟಕದ ಎಮ್‌ಆರ್ ಎಚ್‌ಎಸ್ ಕಾರ್ಯಧ್ಯಕ್ಷ ಬಸಲಿಂಗಪ್ಪ ಖಾನಪೂರ ಆರೋಪಿಸಿದ್ದಾರೆ.
ಅಕ್ರಮ ಮರಳು ಮಾರಾಟ ಮಾಡುವವರಿಗೆ ಸಾಥ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ, ಎಂಬುದು ಸುತ್ತಮುತ್ತ ಇರುವ ಹಳ್ಳಿಗಳ ಜನರ ಆರೋಪವಾಗಿದೆ.
ಎಲ್ಲೆಡೆ ಅಕ್ರಮದ್ದೇ ಕಾರುಬಾರು: ಮರಳು ದಂಧೆಯು ಗಬ್ಬೂರು ಹೋಬಳಿಯಾದ್ಯಂತ ನಡೆಯುತ್ತಿದ್ದು, ದೇವದುರ್ಗ ತಾಲೂಕಿನ ಗಬ್ಬೂರು ಭಾಗದ ಗ್ರಾಮಗಳಾದ ಗೂಗಲ್, ಚಿಕ್ಕರಾಯಕುಂಪಿ, ಹೀರೆರಾಯಕುಂಪಿ, ಮದರಕಲ್, ಹೇಮನಾಳ, ಅಪ್ರಾಲ್, ಬಸವಂತಪುರು, ಬೊಮ್ಮನಾಳ, ಇಂಗಳದಾಳದಲ್ಲಿ ಯಾವುದೇ ಎಗ್ಗಿಲ್ಲದೇ ನಡೆಯುತ್ತಿದ್ದು, ಪೋಲಿಸ್ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ವಿಶ್ವನಾಥ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಂಘಟನೆಗಳಲ್ಲಿ ಕಾಡುತ್ತಿದೆ.
ರಾತ್ರಿ ಪೂರಾ ದಂಧೆ:ಅಕ್ರಮ ಮರಳು ಸಾಗಾಟ ರಾತ್ರಿ ಪೂರ್ತಿ ನಡೆಯುತ್ತದೆ.ಬೆಳಗಾಗುವಷ್ಟರಲ್ಲಿ ಎಲ್ಲವೂ ನಿಂತು ಹೋಗಿ ಏನೂ ಆಗಿಲ್ಲವೆಂಬಂತೆ ಪರಿಸ್ಥಿತಿ ನೆಲೆಸುತ್ತಿದೆ.ಈ ದಂಧೆ ಪೋಲಿಸರ ಕೃಪಾಶೀರ್ವಾದಿಂದಲೇ ನಡೆಯುತ್ತಿದೆ ಎಂಬ ಅನುಮಾನ ಸಂಘಟನೆಯದು.
ಲಾರಿ ಟ್ಯಾಕ್ಟರ್ ಆರ್ಭಟ:ರಾತ್ರಿ ವೇಳೆ ಓಡಾಟನಡೆಸುವವರು ಲಾರಿ ಮತ್ತು ಟ್ಯಾಕ್ಟರ್ ಗಳ ಆರ್ಭಟ ಕಾಣಿಸುತ್ತದೆ. ಜನರಿಗೆ ಎಲ್ಲೆಂದರಲ್ಲಿ ಕಾಣ ಸಿಗುವ ಮರಳು ತುಂಬಿದ ಲಾರಿ ಮತ್ತು ಟ್ಯಾಕ್ಟರ್ ಗಳು ಪೋಲಿಸರ ಕಣ್ಣಿಗೆ ಏಕೆ ಬೀಳುವುದಿಲ್ಲ ಎಂಬ ಅಚ್ಚರಿ ಸಂಘಟನೆಯವರ ಮಾತಾಗಿದೆ.
ತಡೆಯೋರು ಯಾರು?:ಸಂಘಟನೆಯಲ್ಲಿ ಕೊನೆಯಾಗಿ ಕಾಡುತ್ತಿರುವ ಪ್ರಶ್ನೆ ಎಂದರೆ,ಈ ಅಕ್ರಮವನ್ನು ತಡೆಯೋರು ಯಾರು ಎಂಬುದು.ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೋಲಿಸ್ ಇಲಾಖೆ, ಅರಣ್ಯ ಇಲಾಖೆ,ಕಂದಾಯ ಇಲಾಖೆ ಹೀಗೆ ಅಕ್ರಮ ತಡೆಯಬೇಕಾದವರೆಲ್ಲರೂ ದಂಧೆಕೋರರ ಜತೆ ಕೈಜೋಡಿಸಿರುವ ಶಂಕೆ ಇದೆ.ಇದಕ್ಕೆ ರಾಜರೋಷವಾಗಿ ನಡೆಯುತ್ತಿರುವುದೇ ಸಾಕ್ಷಿ.ಹೀಗೆ ರಕ್ಷಕರೇ ಭಕ್ಷಕರಾಗಿರುವುದರಿಂದ ಜನರ ಹಿತ ಕಾಪಾಡೋರು ಯಾರು ಎಂಬ ಚಿಂತೆ ಸಂಘಟನೆಯದು.
ಅಕ್ರಮ ದಂಧೆಗಳ ಬಗ್ಗೆ ಪ್ರಶ್ನೆ ಮಾಡಿದವರ ಮೇಲೆ ಗಬ್ಬೂರು ಠಾಣೆಯ ಪಿಎಸ್‌ಐ ಸಣ್ಣ ಈರೇಶ ಅವರು ರೌಡಿ ಶೀಟರ್, ಗೂಂಡಾ ಕಾಯ್ದೆ ಕೆಸ್ ದಾಖಲು ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ,ಮೇಲಾಧಿಕಾರಿಗಳು ಕೂಡಲೇ ಇವರ ಮೇಲೆ ಕಾನೂನಿನ ಕ್ರಮ ಜರುಗಿಸಿ ವರ್ಗಾವಣೆ ಮಾಡಬೇಕು ಎಂದು ಎಮ್‌ಆರ್ ಎಚ್‌ಎಸ್ ಕಾರ್ಯಧ್ಯಕ್ಷ ಬಸಲಿಂಗಪ್ಪ ಖಾನಪೂರ ಆಗ್ರಹಿಸಿದರು.