ಅಕ್ರಮ ಮರಳು ದಂಧೆ ತಡೆಯುವಂತೆ ಪೋಲಿಸ್ ಮತ್ತು ಗಣಿ ಅಧಿಕಾರಿಗಳಿಗೆ ಹೇಳಿದರೂ, ಕ್ಯಾರೆ ಎನ್ನುತ್ತಿಲ್ಲ: ಎಂ.ವೈ ಪಾಟೀಲ ಆಕ್ರೋಶ

ಅಫಜಲಪುರ:ಜೂ.10: ತಾಲೂಕಿನ ಜೀವನಾಡಿಯಾದ ಭೀಮಾ ನದಿ ಪಾತ್ರದಲ್ಲಿನ ಚಿನ್ನದಂಥ ಮರಳು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಇದನ್ನು ತಡೆಯುವಂತೆ ಪೋಲಿಸ್ ಇಲಾಖೆಯ ಅಧಿಕಾರಿಗಳಿಗೆ ಮತ್ತು ಗಣಿ ಇಲಾಖೆಯ ಅಧಿಕಾರಿಗಳಿಗೆ ಹೇಳಿದರೂ ಕ್ಯಾರೇ ಎನ್ನುತ್ತಿಲ್ಲ ಎಂದು ಶಾಸಕ ಎಂ.ವೈ.ಪಾಟೀಲ ತಮ್ಮ ಆಕ್ರೋಶ ಹೊರಹಾಕಿದರು.

ಪಟ್ಟಣದ ನ್ಯಾಷನಲ್ ಫಂಕ್ಷನ ಹಾಲ್‍ನಲ್ಲಿ ಮತಕ್ಷೇತ್ರದ ಎಲ್ಲಾ ಗ್ರಾ.ಪಂಗಳ ಜನಪ್ರತಿನಿಧಿಗಳು, ಪಿಡಿಒಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಸಂಬಂಧ ಪಟ್ಟವರಿಗೆ ಎಷ್ಟೇ ಬಾರಿ ಹೇಳಿದರೂ ಅಕ್ರಮ ಮರಳು ದಂಧೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದಾಗಿ ಭೀಮಾ ನದಿ ನರಳುವಂತಾಗಿದೆ ಎಂದ ಅವರು ಅಕ್ರಮ ಮರಳು ಧಂದೆ ಕಡಿವಾಣಕ್ಕಾಗಿ ಜಿಲ್ಲಾಧಿಕಾರಿ, ಪೊಲೀಸ್ ವರೀಷ್ಠರು, ಉಸ್ತುವಾರಿ ಮಂತ್ರಿ ಹೀಗೆ ಸಂಬಂಧ ಪಟ್ಟ ಎಲ್ಲರ ಗಮನಕ್ಕೂ ತಂದಿದ್ದೇನೆ. ಆದರೂ ಅದಕ್ಕೆ ಕಡಿವಾಣ ಬೀಳೂತ್ತಿಲ್ಲ ಹೀಗಾಗಿ ಮರಳು ಧಂಧೆ ಕಡಿವಾಣಕ್ಕೆ ಜನಾಂದೋಲನವೇ ನಡೆಯಲಿದ ಎಂದರು. ಅಲ್ಲದೆ ಕೊರೊನಾ ಮಹಾಮಾರಿ ಜಿಲ್ಲೆ, ತಾಲೂಕಿನಲ್ಲಿ ಬಹಳಷ್ಟು ವ್ಯಾಪಿಸಿತ್ತು. ಈಗ ಲಾಕ್‍ಡೌನ್ ಬಳೀಕ ತುಸು ನಿಯಂತ್ರಣಕ್ಕೆ ಬಂದಿದೆ ಎಂದರು.

ಇನ್ನೂ ತಾಲೂಕಿನ ಸರ್ವಾಂಗೀಣ ಅಭಿವೃದ್ದಿಯಾಗಬೇಕಾದರೆ ಗ್ರಾ.ಪಂಗಳ ಪಾತ್ರ ಬಹಳ ದೊಡ್ಡದು. ಹೀಗಾಗಿ ಎಲ್ಲ ಗ್ರಾ.ಪಂ ಚುನಾಯಿತ ಜನಪ್ರತಿನಿಧಿಗಳು, ಪಿಡಿಒಗಳು ಉತ್ತಮ ಸಹ ಸಂಬಂಧ ಇಟ್ಟುಕೊಂಡು ಗ್ರಾಮಗಳ ಅಭಿವೃದ್ದಿಗೆ ಶ್ರಮಿಸಿ. ಸರ್ಕಾರದಿಂದ ಬರುವ ಅನುದಾನಗಳ ಸದ್ಬಳಕೆ ಮಾಡಿಕೊಳ್ಳಿ, ಅನುದಾನದ ಕೊರತೆ ಆದರೆ ನನ್ನ ಬಳಿ ಬಂದು ಮನವಿ ಸಲ್ಲಿಸಿದರೆ ಹೆಚ್ಚಿನ ಅನುದಾನ ನೀಡುವೆ ಎಂದು ಭರವಸೆ ನಿಡಿದರು.

ತಾ.ಪಂ ಮಾಜಿ ಉಪಾದ್ಯಕ್ಷ ಭೀಮಾಶಂಕರ ಹೊನ್ನಕೇರಿ ಮಾತನಾಡಿ ಇಳಿ ವಯಸ್ಸಿನಲ್ಲೂ ಶಾಸಕರು ತಾಲೂಕಿನಾದ್ಯಂತ ಓಡಾಡಿ ಜನಸೇವೆ ಮಾಡುತ್ತಿದ್ದಾರೆ. 2500 ಸಾವಿರ ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ದಿಗೆ ವಿನಿಯೋಗಿಸಿದ್ದಾರೆ. ಇಂತಹ ಶಾಸಕರು ಸಿಗುವುದೇ ಅಪರೂಪ ಎಂದರು.

ತಹಸೀಲ್ದಾರ ಯಲ್ಲಪ್ಪ ಸುಬೇದಾರ, ತಾ.ಪಂ ಇಒ ಅಬ್ದುಲ್ ನಬಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ವಿಠ್ಠಲ್ ನಾಟಿಕಾರ, ಅಮೃತ ಮಾತಾರಿ, ಸಂಗೀತಾ ಗುತ್ತೇದಾರ, ಬಸವರಾಜ ಮಂಟೆ, ಸುಗಲಾಬಾಯಿ ಹತ್ತಳ್ಳಿ, ಪಾರ್ವತಿ ಗೋಳಸಾರ, ಖೇರಾಬಾಯಿ ವಾಳುಕರ, ಅಧಿಕಾರಿಗಳಾದ ರತ್ನಾಕರ ತೋರಣ, ಚೇತನ ಗುರಿಕಾರ, ಕರಿಬಸಮ್ಮ, ರಮೇಶ ಪಾಟೀಲ್, ರಮೇಶ ಮಟ್ನಾಳ, ಪಿಎಸ್‍ಐ ವಿಶ್ವನಾಥ ಮುದರೆಡ್ಡಿ, ಭೀಮರತ್ನ ಸಜ್ಜನಮ, ಮುಖಂಡರಾದ ಅಶೋಕ ಪಾಟೀಲ ಸೊನ್ನ, ಮಹಿಬೂಬ ಪಟೇಲ ಕಲ್ಲೂರ ಸೇರಿದಂತೆ ಮತಕ್ಷೇತ್ರದ ಗ್ರಾ.ಪಂ ಅದ್ಯಕ್ಷರು, ಸದಸ್ಯರು, ಸಿಬ್ಬಂದಿಗಳು ಇದ್ದರು.