ಅಕ್ರಮ ಮರಳು ದಂಧೆ ತಡೆಗೆ ರಸ್ತೆಗೆ ಕಲ್ಲು ಬಂಡೆ

ರಾಯಚೂರು.ಏ.೨೭- ಕೃಷ್ಣಾ ನದಿಯಲ್ಲಿ ಅಕ್ರಮವಾಗಿ ಮರಳು ತುಂಬುವ ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ಹಾಕಲಾದ ರಸ್ತೆಯನ್ನು ನಿನ್ನೆ ಕಲ್ಲು ಬಂಡೆಗಳಿಂದ ಬಂದ್ ಮಾಡಲಾಯಿತು.
ಸಹಾಯಕ ಆಯುಕ್ತರ ಆದೇಶದ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈ ಕಾರ್ಯಾಚರಣೆ ನಿರ್ವಹಿಸಿದರು. ಏ.೨೫ ರಂದು ರಾಯಚೂರು ತಾಲೂಕಿನ ಕಾಡ್ಲೂರು ಗ್ರಾಮದ ವ್ಯಾಪ್ತಿಯ ಕೃಷ್ಣಾ ನದಿಗೆ ಮರಳು ತುಂಬಿಸಲು ಟ್ರ್ಯಾಕ್ಟರ್ ಹೋಗಲು ನಿರ್ಮಿಸಿದ ರಸ್ತೆಯನ್ನು ಜೆಸಿಬಿ ಮೂಲಕ ಕಲ್ಲು ಬಂಡೆಗಳನ್ನು ಹಾಕಿ ನಿರ್ಬಂಧಿಸಲಾಗಿದೆ. ಏ.೧೬ ರಂದು ಗುಂಜಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ನದಿ ಪಾತ್ರಕ್ಕೆ ಹೋಗಲು ಅಧಿಕೃತ, ಅನಧಿಕೃತವಾಗಿ ಮರಳು ಟ್ರ್ಯಾಕ್ಟರ್ ರಸ್ತೆ ನಿರ್ಮಿಸಲಾಗಿತ್ತು.
ಈ ರಸ್ತೆಯನ್ನು ತೋಡುವ ಮೂಲಕ ಟ್ರ್ಯಾಕ್ಟರ್ ಹೋಗದಂತೆ ತಡೆಯಲಾಗಿದೆ. ಕೆಲವೆಡೆ ಕಾಂಕ್ರೀಟ್ ಪಿಲ್ಲರ್‌ಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ಅಕ್ರಮ ಮರಳು ದಂದೆ ತಡೆಯಲು ಕ್ರಮ ಕೈಗೊಳ್ಳಲಾಗಿದೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಸಹಾಯಕ ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ.